Wednesday, August 12, 2015

"ಪಾಕಿಸ್ತಾನ್ ಮುರ್ದಾಬಾದ್,, ಪಾಕಿಸ್ತಾನ್ ಮುರ್ದಾಬಾದ್.." ಒಂದೇ ಸಮನೆ ಅರಚುತ್ತಿದ್ದ ಕತ್ತೆಯಂತೆ. ಯಾಕೆ ಅಂತ ಬೇರೆ ಹೇಳಬೇಕೆ? ಈ ದೇಶದಲ್ಲಿ ರಾಷ್ಟ್ರಪ್ರೇಮ ತೋರ್ಪಡಿಸಲು ಇರುವ ಮಾರ್ಗ ಇದನ್ನು ಬಿಟ್ಟರೆ ಬೇರ್ಯಾವುದಿದೆ? ವೈರಿ ದೇಶವನ್ನು ಕುಂತೂ ನಿಂತೂ ಅಟ್ಟಾಡಿಸಿ ಅವಮಾನಿಸಿದಾಗಲೇ ದೇಶಭಕ್ತನಾಗಲು ಸಾಧ್ಯ. ಇಲ್ಲದವನು ಬರೇ ಹೇಡಿ. ದೇಶ ದ್ರೋಹಿ. ಅಂತೆಯೇ ಇವನು. ಮುಗ್ಧ ಜನರ ಅಥವಾ ಹಾಗಂತ ಇವನಂದುಕೊಂಡಿರುವವರ ನಡುವೆ ನಿಂತು ತನ್ನ ಜನ್ಮಭೂಮಿಯನ್ನು ಹೊಗಳುವ ಬದಲು ಯಾರನ್ನೋ ತೆಗಳುತ್ತಿದ್ದಾನೆ, ತನ್ನ ಸಮಯಕ್ಕೆ ಬೆಲೆಯೇ ಇಲ್ಲವೆಂಬಂತೆ. ಬೃಹತ್ ವೇದಿಕೆ ಅವನ ಭಾಷಣಕ್ಕಾಗಿ ಸಿದ್ದವಾಗಿತ್ತು. ಜನ ಸಾಗರೋಪಾದಿಯಲ್ಲಿ ಅವನ ರಗಳೆಯೋ ಬೊಗಳೆಯೋ ಏನೋ ಒಂದನ್ನು ಕಿವಿ ತುಂಬಿಸಲು ಕಾತರರಾಗಿದ್ದರು. ಪ್ರತೀ ಬಾರಿ ಪಾಕನ್ನು, ಪಾಕಿಸ್ತಾನಿಯರನ್ನು ಹೀಗಳೆದಾಗ ಸಭಿಕರಿಂದ ಕವಿಗಡಚಿಕ್ಕುವ ಚಪ್ಪಾಳೆ. ಹೋ ಎಂಬ ಕೂಗು. ದೇಶಪ್ರೇಮ ಬಲಿತು ರೋಮ ನಿಮಿರಿ ಗನ್ನೋ ಖಡ್ಗವೋ ಈಗ ಕೈಗೆ ಕೊಟ್ಟಿದ್ದರೆ ಅವರೆಲ್ಲರೂ ಸೇರಿ ಪಾಕಿ ಪಾತಕಿಗಳನ್ನು ಇತಿಹಾಸವಾಗಿಸುತ್ತಿದ್ದರೋ ಏನೋ..! ವೇದಿಕೆಯ ಮೇಲೆ ಕುಳಿತಿದ್ದ ಗಣ್ಯರೆಲ್ಲಾ ಇವನ ಮಾತಿಗೆ ಗೋಣಾಡಿಸುತ್ತಿದರು. ಆಹಾ.. ಎಂಥಾ ಭಾಷಣ..!! ಕಿವಿ ಇಂದು ತಂಪಾದವು. ಮೈಮನಗಳು ಕೆಂಪಾದವು. ಇವನಲ್ಲವೇ ದೇಶೋದ್ಧಾರಕ? ಇವನಲ್ಲವೇ ಭಾರತ ಮಾತೆಯ ಅಸಲಿ ಸುಪುತ್ರ..? ಉಳಿದ ನಕಲಿ ಪುತ್ರರಿಗೆ ನಾಚಿಕೆಯಾಗಬೇಕು. ಒಂದು ದಿನವಾದರೂ ಈ ಕಲಬೆರಕೆ ಮಕ್ಕಳು ಪಾಕಿಸ್ತಾನಕ್ಕೆ ಬೈದದ್ದುಂಟೇ? ಬೈಯ್ಯದ ಇವರೆದ್ದೆಂಥಾ ರಾಷ್ಟ್ರಪ್ರೇಮ? ಎಂದೆಲ್ಲಾ ಅಲ್ಲಿನವರು ಮನದಲ್ಲೇ ಲೆಕ್ಕಹಾಕುತ್ತಿದರು. ಜನರ ಸಿಳ್ಳೆ ಚಪ್ಪಾಳೆಗಳಿಂದ ಉಲ್ಲಸಿತನಾದ ಆತ ಮತ್ತಷ್ಟು ಜೋರಾಗಿ ಊಳಿಡತೊಡಗಿದ. ಪಾಕಿಸ್ಥ್ಹಾನದ ವಂಶಸ್ಥರು ಈ ಭರತ ಪುಣ್ಯಭೂಮಿಯಲ್ಲಿದ್ದಾರೆಂದೂ ಅವರನ್ನೆಲ್ಲಾ ಒದ್ದೋಡಿಸುತ್ತೇನೆಂದೂ ಶಪಥವನ್ನೇ ಗೈದ. ಇಡೀ ದೇಶವೇ ತನ್ನೊಬ್ಬನ ಆಸ್ತಿಯೆನ್ನುವಂತೆ.
ಬಡ ದೇಶದ ಉದ್ಧಾರಕ್ಕಾಗಿ ಕೋಟಿ ಖರ್ಚು ಮಾಡಿದ ಭಾಷಣ. ಬಡವಲ್ಲವೇ ಭರತ ಖಂಡ? ಯಾರು ಬಡವರಲ್ಲದವರು? ಎಲ್ಲರೂ ಬಡವರೇ, ಎಲ್ಲರೂ ತಮ್ಮನ್ನು ತಾವು ಬಡ ಮಾಸ್ತರನೆಂದೋ, ಬಡ ಕಾರ್ಮಿಕನೆಂದೋ, ಬಡ ಸರಕಾರಿ ನೌಕರನೆಂದೋ, ಬಡ ಉದ್ಯಮಿ, ಬಡ ರಾಜಕಾರಣಿ, ಬಡ ಮಂತ್ರಿ ಈಗಂತೂ ಬಡ ಪ್ರಧಾನ ಮಂತ್ರಿಯೆಂದೇ ಪರಿಚಯಿಸುತ್ತಾರೆ. ಇಂಥಾ ಬಡವರ ಮಧ್ಯೆ ಇವನ ಕೋಟಿಯ ಭಾಷಣ, ದೇಶದ ಉದ್ಧಾರಕ್ಕಾಗಿ. ಈ ಭಾಷಣ ಇರುವುದೇ ಬಡ ಜನರ ಬಡ ನಾಡಿಗಾಗಿ. ಅವರ ಮನರಂಜನೆಗಾಗಿ ಅಲ್ಲ ಮನಭಂಜನೆಗಾಗಿ. ಬಡವರ ಪರವಾಗಿ ಮಾತನಾಡುವವರು ಬೇಡವೇ? ಅವರನ್ನು ಸರಿದಿಕ್ಕಿಗೆ ತರುವ ಮಾರ್ಗ ದರ್ಶಕರು ಬೇಡವೇ? ಈ ಎಲ್ಲದಕ್ಕಾಗಿ ಇವನ ಭಾಷಣ. ಮಾತಾಡಬೇಕು. ಮಾಡಲಾರದವನು ಮಾತನಾಡುತ್ತಾನೆ. ಮಾತಿಗಿಲ್ಲವೇ ಬೆಲೆ? ಅದೂ ಕೋಟಿಯದ್ದು. ಮನೆಯನ್ನು ಹೊಗಳದಿದ್ದರೂ ಪರವಾಗಿಲ್ಲ, ನೆರೆಯವನನ್ನು ಎಂದೂ ಬಿಡಲಾರೆನೇ. ನೆರೆಯವರೊಂದಿಗೆ ಸಂಭಂದ ಹೊಂದಿರುವವನನ್ನೂ ಜರಿಯಬೇಕು. ಹೊಂದಬಹುದಾದವನನ್ನೂ ತುರಿಯಬೇಕು. ನೆರೆಯವನ ಮುಖ ನೋಡದವನನ್ನೂ ಬಿಡಲಾರೆನೇ, ಊಹೆಗಳಿಗೂ ನಿಜದ ಲೇಪ ಹಚ್ಚಿ ಕರಿದು ಮಸಿಯಾಗಿಸಬೇಕು ತನ್ನ ಕೋಟಿ ಖರ್ಚು ಮಾಡಿದ ಭಾಷಣದಲ್ಲಿ. ಭಾಷಣ ಅಂದ್ರೇನೇ ಹಾಗೆ. ಸಾವಿರ ಜನರನ್ನು ಏಕ ಕಾಲದಲ್ಲಿ ಮೂರ್ಖರನ್ನಾಗಿಸುವುದು. ತಾನು ಹೇಳುತ್ತಿರುವುದು ಸತ್ಯ. ತಾನು ಹೂಳುವುದು ಅಲ್ಲ ಹೇಳುವುದು ಸತ್ಯವನ್ನು ಮಾತ್ರ. ತಾನು ಹೇಲುವುದು ಅಲ್ಲ ಹೇಳುವುದು ಮಾತ್ರ ಸತ್ಯ. ತಾನು ಮಾತ್ರ ಹಳಿಯುವುದು ಅಲ್ಲ ಹೇಳುವುದು ಸತ್ಯ. ಎಂಬಿತ್ಯಾದಿಗಳನ್ನು ಶೋತೃಗಳ ಮನಕಲಕುವಂತೆ ತಲುಪಿಸುವುದು. ಆ ಕಲೆ ಇವನಿಗಿಂತ ಚೆನ್ನಾಗಿ ಬಲ್ಲವರಾರು? ಸತ್ಯ-ನ್ಯಾಯ-ಧರ್ಮಗಳು ಇವನ ಮಾತಿನ ಭರಕ್ಕೆ ಸಿಕ್ಕು ವಿಲವಿಲನೇ ಒದ್ದಾಡಬೇಕು. ಸಿಗದಿದ್ದರೆ, ತಾನೇ ಎಳೆತಂದು ಅತ್ಯಂತ ನೈತಿಕವಾಗಿ ಮಾತಿನಲ್ಲೇ ಅತ್ಯಾಚಾರ ಎಸಗುವುದು ಇವನಿಗೆ ಗೊತ್ತು.
ತಿಂಗಳಿಗೆ ಕನಿಷ್ಠ ಹತ್ತಾದರೂ ಭಾಷಣ ಮಾಡಿದರೇನೆ ಇವನಿಗೆ ಸಮಾಧಾನ. ಪ್ರತೀ ಭಾಷಣಕ್ಕೂ ಲಕ್ಷ ತಲೆ ಸೇರಬೇಕು. ಖಾಲಿ ತಲೆಯಾದರೂ ಪರವಾಗಿಲ್ಲ. ತುಂಬಿದ ತಲೆ ಇವನ ಭಾಷಣ ಕೇಳುವುದುಂಟೇ? ಹಾಗಲ್ಲ, ಭಾಷಣಕ್ಕೆ ನೂಕು ನುಗ್ಗಲಾಗಬೇಕು. ಯಾರೋ ಒಂದಿಬ್ಬರು ಕಾಲ್ತುಳಿತಕ್ಕೋ ಕೈತುಳಿತಕ್ಕೋ ಸಿಕ್ಕು ಆಸ್ಪತ್ರೆ ಸೇರಬೇಕು. ಅಂಗಡಿ ಮುಗ್ಗಟ್ಟುಗಳೆಲ್ಲಾ ಮುಚ್ಚಿ ಇವನದೇ ಭಜನೆ ಮಾಡಬೇಕು. ಇಡೀ ನಾಡಿಗೆ ನಾಡೇ ಸ್ತಬ್ದವಾಗಬೇಕು ಇವನ ಭಾಷಣ ಕೇಳಲೆಂದು. ರಸ್ತೆಗಳಲ್ಲೂ ಜನ ತುಂಬಿ ವಾಹನಗಳು ಗಂಟೆಗಟ್ಟಲೆ ಕಾಯಬೇಕು. ಬಸುರಿ ಎನಾದರೂ ವಾಹನದಲ್ಲಿದ್ದರೆ ಅಲ್ಲೇ ಹೆತ್ತು ತನ್ನ ಹೆಸರೇ ಇಡುವಂತಾಗಬೇಕು, ಹೆಣ್ಣಾದರೂ ಗಂಡಾದರೂ. ಅಲ್ಲವೇ ಮತ್ತೆ? ಮುಂದಿನ ಭಾಷಣದಲ್ಲಿ ಇದನ್ನೂ ಸೇರಿಸಿ ತನ್ನ ಕರಾಮತ್ತೆನ್ನಬೇಡವೇ? ಕಿಕ್ಕಿರಿದ ಜನಸಂದಣಿಯ ನಡುವೆ ತಾನು ಬೊಬ್ಬಿರಿದು ಭಾಷಣ ಮಾಡಬೇಕು. ಒಬ್ಬ ಭಾಷಣಕಾರ ಇದಕ್ಕಿಂತ ಹೆಚ್ಚು ಏನು ಆಗ್ರಹಿಸಿಯಾನು? ರಸ್ತೆಯ ಇಕ್ಕೆಲಗಳಲ್ಲಿ ಅರಾಳೆತ್ತರದ ಬ್ಯಾನೆರ್ಗಳು ರಾರಾಜಿಸಬೇಕು ಧ್ವಜ-ತೋರಣಗಳೊಂದಿಗೆ. ಬರೇ ಸ್ವಾಗತ.. ಶುಭಕೋರುವ.. ಅಂತಿದ್ದರೆ ಸಾಲದು, ಬಡವರ ಬಂಧು, ಅಶಾಕಿರಣ-ರಮಣ, ಸಾಮ್ರಾಟ, ಚಕ್ರವರ್ತಿ, ಕಾಡಿನ ರಾಜ-ನಾಡಿನ ಬೀಜ, ದೇವಾಧಿದೇವ, ಪರಮಪೂಜ್ಯ ಅಂತೆಲ್ಲಾ ಬಿರುದು ಬಾವಲಿಗಳು ಅಚ್ಚಾಗಬೇಕು. ಅವಕ್ಕೆ ಪಂಚಾಮೃತ ಅಭಿಷೇಕ ನಡೆಯಬೇಕು, ಸಾಧ್ಯವಿದ್ದರೆ ಪ್ರತಿಷ್ಠಾಪಿಸಿ ಮೂರು ಹೊತ್ತು ಉಪಾಸನೆ ನಡೆದರೂ ಚಿಂತಿಲ್ಲ. ಉದ್ವಾಯನವಿಲ್ಲದೇ ಅವುಗಳು ಅಲ್ಲೇ ಕೊಳೆತು ನಾರಬೇಕು ಜನಕ್ಕೆ ಮುನಿಸಿಪಾಲಿಟಿಯವರನ್ನು ಬೈಯ್ಯಲು ಕಾರಣವಾಗಲೆಂದು.  
ಅಯ್ಯೋ ದೇವರೇ ಎಷ್ಟೊಂದು ಕಷ್ಟ ಪಡುತ್ತಿದ್ದಾನೀತ? ಗಡಿಯಲ್ಲಿ ಕಾಯುವ ಯೋಧನಿಗಿಂತ ಹೆಚ್ಚು ರೋಷಾವೇಶಗಳು ಜವಾಬ್ದಾರಿಗಳು ಇವನ ಮೇಲಿಲ್ಲವೇ? ಈ ರಾಷ್ಟ್ರದ ಸಂಘಟನೆಗಾಗಿ ತಾನು ಭಾಷಣ ಮಾಡುತ್ತಿದ್ದೇನೆ. ತನ್ನ ಸಮಾವೇಶ ಸಂಗಮಗಳು ದೇಶದ ಸನಾತನವೋ ಪುರಾತನವೋ ಆದ ಸಮುದಾಯದ ಶ್ರೇಯಸ್ಸಿಗಾಗಿ. ತನ್ನ ಭಾಷಣವೇನಾದರೂ ನಿಂತು ಹೋದರೆ ಮೊಘಲರಿಂದ ಹಿಡಿದು ಬ್ರಿಟೀಷರವರೆಗೆ ಈ ದೇಶವನ್ನು ಪುನಃ ಆಕ್ರಮಿಸಿದರೆ ಅನ್ನೋ ಆತಂಕ ಇವನದು. ಅದಕ್ಕೇ ಈ ಮಾತಿನ ಭರ. ನಾಡಿನ ಪ್ರಜ್ನಾವಂತ ನಾಗರೀಕರನ್ನು ಎಚ್ಚರಿಸಲು, ಎಬ್ಬಿಸಲು. ಈಗಾಗಲೇ ಎದ್ದಿರುವವರನ್ನು? ಏಳಲೇ ಬಾರದೆಂದು ಹಠ ಹಿಡಿದವರನ್ನು? ಮಾತು ನಿಲ್ಲುತ್ತಲೇ ಇಲ್ಲ. ಮಾತಿನಿಂದಾದ ನಷ್ಟ ಮುತ್ತು ಕೊಟ್ಟರೂ ತುಂಬದು. ವೈರಿಗಳನ್ನು, ವೈರಿಗಳೆಂದು ತಾನಂದುಕೊಂಡಿರುವವರನ್ನು ತೆಗಳಿ ಮನಕ್ಕೆ ಕಿಚ್ಚು ಹಚ್ಚಿ ಉತ್ತೇಜಿಸಿ ಉದ್ರೇಕಿಸಿ ಒಗ್ಗಟ್ಟಿನ ಹೆಸರಲ್ಲಿ ಸಮರವನ್ನೇ ಬಯಸುತ್ತಿದ್ದಾನೆ ಮೂಢ. ಯಾರೋ ಚೀಟಿ ಕೊಟ್ಟರು ಇನ್ನೂ ಭಾಷಣಕ್ಕೆ ಸರತಿಯಲ್ಲಿದ್ದಾರೆಂದು. ಮಾತು ಮುಗಿಸಿದ.
"ದೇಶವಾಸಿಗಳೇ, ಕ್ರಾಂತಿ ವೀರರೇ, ಶೂರಪರಾಕ್ರಮಿಗಳೇ, ಏಳಿ ಎದ್ದೇಳಿ, ನಮ್ಮ ಬಲಪ್ರದರ್ಶನ ಮಾಡೋಣ. ಎಲ್ಲಾರೂ ಒಂದಾಗಿ ಭಾರತ ಮಾತೆಯ ಪುಣ್ಯಭೂಮಿಯನ್ನು ಹಸನಾಗಿಸೋಣ"
ಕೇಳಿದ ಭಾರತ ಮಾತೆಯೂ ವಿಷಾದದಿಂದ ನಕ್ಕಳು. ಈಗಾಗಲೇ ಒಂದಾಗಿದ್ದೇವಪ್ಪಾ, ಇನ್ನೂ ಒಂದಾಗಿ ಬಲ ತೋರಿಸೋದು ಯಾರಿಗೆ?ಯಾಕೆ? ಅಂತ ಯಾರೊಬ್ಬನೂ ಪ್ರಶ್ನಿಸಲಿಲ್ಲ..!!  

No comments:

Post a Comment