Tuesday, December 4, 2012

ಬರಲಾರೆಯಾ...



ತೇಲಿದೆ ತನ, ಹಾರಿದೆ ಮನ
ನಯನಗಳ ಮಾಟವೇನು ನಿನ್ನ
ಹರೆಯದ ವಯಸು, ಅರಳಿದ ಮನಸು
ಬಳಿ ಬಂದು ಬಳಸಿಕೊ ಎನ್ನ....

ಈ ಅಂತರವಿನ್ನು ಸಾಕು.
ಆ ನಗುವಲಿ ಸಹಿ ಹಾಕು..
ಮೌನವಿಹುದು ಈಗ ನಾ ತಾಳಲಾರೆ
ಸನಿಹ ನೀ ಇಲ್ಲದೆ ನಾ  ಬಾಳಲಾರೆ..
ಬರಲಾರೆಯಾ... ನೀ ಬಳಿ ಬರಲಾರೆಯಾ....

ಮೊಗವಿಹುದು ನಿನ್ನ, ಇಬ್ಬನಿಯಲಿ
ನಗುವಿಹುದು ನಿನ್ನ, ಇಂಚರದಲಿ..
ಗಿಡಮರಗಳೂ ಸೂಸಿದೆ ನಿನ್ನಯ ಪರಿಮಳ.
ಬಳಿ ನೀ ಇಲ್ಲದೆ, ಇಹುದು ತಳಮಳ..
ಬರಲಾರೆಯಾ... ನೀ ಬಳಿ ಬರಲಾರೆಯಾ....

ಶುರುವಾಗಿದೆ ಪ್ರಣಯದ ಪಯಣ
ನವ ಹುರುಪು,ಉಲ್ಲಾಸದಲಿ ಈ ಜೀವನ..
ಸಿಹಿ ಮುತ್ತೊಂದು ನೀಡುವಾಸೆ.
ಇರುಳೊಂದು ಮತ್ತಲ್ಲಿ ಕಳೆಯುವಾಸೆ..
ಬರಲಾರೆಯಾ... ನೀ ಬಳಿ ಬರಲಾರೆಯಾ....

ನೀನಿಲ್ಲದೇ.....



ಯಾಕೋ ಏನೋ ಮನವೀಗ ತಲ್ಲಣ..
ಸೇರಿದಂತಿದೆ ಹ್ರದಯವೀಗ ಮಸಣ..
ಶೂನ್ಯವಾಯಿತು ನನ್ನೀ ಪ್ರತೀ ಕ್ಷಣ..
ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..

ಮಾತೇ ಮರೆಯಾಯಿತು..
ಮೌನವೇ ಪಾಡಾಯಿತು..
ಕಾಯವೇ ಸೆರೆಯಾಯಿತು..
ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..

ಮಿಡಿದಿಹುದು ನಿನಗಾಗಿ ಮನವು..
ತುಡಿದಿಹುದು ನಿನಗಾಗಿ ತನುವು..
ಕಳೆಯಲಾಗದೆ ಒಂದೊಂದು ಕ್ಷಣವು..
ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..

ಮೂಡಿಸಿದೆ ಮನದಲ್ಲಿ ನಿನ್ನಯ ಛಾಪು..
ಇನ್ನೆಲ್ಲಿದೆ ದಿನದ ಆ ಹೊಳಪು..
ಉಳಿದಿಹುದು ನನ್ನಲ್ಲಿ ಬರೀ ನೆನಪು..
ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..

ನಿನ್ನ ಛಲವ ನಾ ಬಲ್ಲೆನು..
ನಿನಗೆಂದೂ ಒಲ್ಲೆ ಎನಲಾರೆನು..
ಬಾಳಲೆಂದೂ ಗೆಲುವ ಕಾಣಲಾರೆನು..
ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..

ವಿರಹವೇತಕೆ ನನ್ನಲ್ಲಿ ಈ ಬಗೆ..
ಮುನಿಸೇತಕೆ ಇಹುದು ನನ್ನಲ್ಲಿ ನಿನಗೆ..
ದಿನವಿಡೀ ನಿಶೆಯಾಯ್ತು ನನಗೆ..
ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..ನೀನಿಲ್ಲದೇ..

Wednesday, May 30, 2012

   ಮಾನ್ಯ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಶಿಖಂಡಿಗೆ ಪ್ರಶಾಂತ್ ಭೂಶಣ್ ಹೋಲಿಸಿದ್ದು ಈಗ ರಾಷ್ಟ್ರಮಟ್ಟದಲ್ಲಿ ವಿಪರೀತ ಚರ್ಚೆಯಾಗುತ್ತಾ ಇದೆ. ಖಂಡಿತವಾಗಿಯೂ ಇದು ಚರ್ಚೆಯ ವಿಶಯವೇ. ಒಂದು ದೇಶದ ಅತ್ಯುನ್ನತ ಪದವಿಯನ್ನು ಹೊಂದಿದ ವ್ಯಕ್ತಿಯನ್ನು ಈ ರೀತಿ ಜರಿದಾಗ ಅದು ದೇಶಕ್ಕೇ ಅವಮಾನ. ಆದರೆ ಈ ಅವಮಾನ ದೇಶಕ್ಕೆ ಈಗ ಉಂಟಾಗಿದ್ದೇ..?? ಖಂಡಿತ ಅಲ್ಲ ೨೦೦೪ರ ಚುನಾವಣೆಯ ನಂತರ  ಇದೇ ಮನಮೋಹನ ಸಿಂಗ್ ದೇಶವನ್ನಾಳಿದರು(?). ಈಗಲೂ ಅದೇ ಪದವಿಯಲ್ಲಿ ಇದ್ದಾರೆ. ದೇಶದ ಪ್ರಧಾನಿಯಾಗಿ ಅವರು ಗೌರವಕ್ಕೆ ಅರ್ಹರು. ಹೆಸರಾಂತ ಆರ್ಥಿಕ ತಜ್ನ,ಪ್ರಾಮಾಣಿಕ,ಸಾತ್ವಿಕ ಸಾದು ಸಜ್ಜನ ಎಂದೆಲ್ಲ ಅವರು ಹೆಸರುವಾಸಿ. ವೈಯಕ್ತಿಕವಾಗಿ ಅವರು ಹೌದು ಕೂಡ.
    ವಿಷಯಕ್ಕೆ ಬರೋಣ. ಆರ್ಥಿಕ ತಜ್ನನ ದೇಶದಲ್ಲಿ ಒಪ್ಪೊತ್ತಿಗೆ ಊಟಕ್ಕೆ ಗತಿ ಇಲ್ಲದ ಕೋಟಿ ಜನರಿದ್ದಾರೆ. ಕನಿಷ್ಟ ಮೂಲಸೌಕರ್ಯ ಇಲ್ಲದ ಅದೆಷ್ಟೋ ಹಳ್ಳಿಗಳಿವೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನ ಪರದಾಡುತ್ತಿದ್ದಾರೆ. ಬಡವರ್ಗವನ್ನು ಬಿಡಿ, ಮಧ್ಯಮವರ್ಗದವರೇ ದಿನಕಳೆಯಲು ಹರಸಾಹಸ ಪಡುವಂತಾಗಿದೆ. ದೇಶದ ಆರ್ಥಿಕ ಮಟ್ಟ ಕುಸಿದು ಮಣ್ಣು ಪಾಲಾಗಿದೆ. ಸಂಪತ್ತಿನ ಕೇಂದ್ರೀಕರಣ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಕಪ್ಪು ಹಣ ಎರ್ರಾಬಿರ್ರಿ ಕೇಂದ್ರೀಕೃತವಾಗುತ್ತಾ ಇದೆ. ಈಗ ಹೇಳಿ ಈ ವ್ಯಕ್ತಿ ಆರ್ಥಿಕ ತಜ್ನನಾಗಿ ದೇಶಕ್ಕಾದ ಲಾಭ ಏನು..??
ಕಳೆದ ೮ ವರ್ಷದಲ್ಲಿ ಗಮನಾರ್ಹವಾದ ಯಾವ ಬದಲಾವಣೆ ದೇಶದಲ್ಲಿ ಆಗಿದೆ..?? ಬಡತನ,ಜನಸಂಖ್ಯೆ,ಬ್ರಷ್ಟಾಚಾರ ಇವು ದೇಶದ ಅತಿ ದೊಡ್ಡ ಸಮಸ್ಯೆಗಳು. ಇವುಗಳಲ್ಲಿ ಯಾವುದಾದರೊಂದನ್ನು ಮಾನ್ಯ ಮನಮೋಹನ್ ಸಿಂಗ್ ತಡೆಗಟ್ಟಿದ್ದಾರೆಯೇ..?? ಹೋಗಲಿ ಅದಕ್ಕಾಗಿ ಪ್ರಯತ್ನಿಸಿದ್ದಾರೆಯೆ..?? ಜನಲೋಕಪಾಲ್ ಬಿಲ್ ಜಾರಿಗೊಳಿಸುವ ವಿಶಯದಲ್ಲಿ ಅವರ ನಿಲುವನ್ನು ನಾವು ಕಂಡಿದ್ದೇವೆ. ಇದೆಲ್ಲ ಹೋಗಲಿ. ಕಳೆದ ಕೆಲವು ಸಮಯ ಹಿಂದೆ ಯುಪಿಎ ಅಧ್ಯಕ್ಷೆ ಎಂದು ಕರೆಸಿಕೊಳ್ಳುವ ವಿದೇಶಿ ನಾರಿ ಅನಾರೋಗ್ಯ ಬಿದ್ದಾಗ ನಮ್ಮ ದೇಶದಲ್ಲಿ ಚಿಕಿತ್ಸೆಗೆ ಆಸ್ಪತ್ರೆಯೇ ಇರಲಿಲ್ಲ..!! ಇನ್ನು ಈ ದೇಶದ ಬಡ ದೇಶವಾಸಿಗಳ ಗತಿ ಏನು..??
ಮಾಹಿತಿ ತಂತ್ರಜ್ನಾನದ ಈ ಯುಗದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ದೇಶಕ್ಕೆ ಕೊಟ್ಟಿರುವ ಅಭೂತಪೂರ್ವ ಉಡುಗೊರೆ ಏನು..?? ಒಂದಶ್ಟು ರಸ್ತೆ ದುರಸ್ತಿ, ಒಂದಶ್ಟು ಹೊಸ ಕಾನೂನುಗಳು, ಒಂದಶ್ಟು ವಿದೇಶ ಪ್ರವಾಸ, ಚಿತ್ರ-ವಿಚಿತ್ರ ಬಜೆಟ್ ಮಂಡನೆ ಮಾಡೊದೇ ಇವರ ಕೆಲಸವಾದರೆ ಅದಕ್ಕೆ ಈ ಪ್ರಾಮಾಣಿಕ,ಸಜ್ಜನನ ಅಗತ್ಯವಿತ್ತೇ..?? ಈ ವ್ಯಕ್ತಿ ದೇಶಕ್ಕಾಗಿ ಪ್ರಧಾನಿ ಪದವಿಯಲ್ಲಿ ಕುಳಿತು ಮಾಡಿದ ಮಹಾನ್ ಸಾಧನೆಯಾದರು ಏನು..??
  ಪ್ರಧಾನಿಯಾಗಿ ಮನಮೋಹನ್ ಸಿಂಗ್ ವರ್ತನೆ ಒಂದು ಸಾಮಾನ್ಯ ಪ್ರಜೆಯಂತಾಗಿದೆ. ಒಬ್ಬ ಈ ದೇಶದ ಪ್ರಜೆ ಹೇಗೆ ತನ್ನ ನೈತಿಕತೆಯ ಕಣ್ಣನ್ನು ಮುಚ್ಚಿ ಜೀವನ ನಡೆಸುತ್ತಾನೋ ಹಾಗೆಯೇ ಸಿಂಗ್ ಕೂಡ ಜೀವಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಅವರಿಗೆ ಪ್ರಧಾನಿ ಪದವಿಯ ಅಗತ್ಯವಿತ್ತೇ.??ಅಪರಾಧ ಮಾಡುವುದು ಕಾನೂನು ಬಾಹಿರ,ಹಾಗೆಯೆ ಅಪರಾಧ ನೋಡಿಕೊಂಡು ಸುಮ್ಮನೆ ಕುಳಿತಿರುವುದೂ ಕಾನೂನು ಬಾಹಿರ. ಈ ಸಂಧರ್ಭದಲ್ಲಿ ನಮ್ಮ ಪ್ರಧಾನಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರಲ್ಲವೆ? ನಾನು ತಪ್ಪು ಮಾಡಲಾರೆ, ಇನ್ನೊಬ್ಬರ ತಪ್ಪನ್ನು ನಿಲ್ಲಿಸಲಾರೆ ಎಂಬಂತೆ ಅವರ ವರ್ತನೆ ಇರುವುದು ನಿಜವಲ್ಲವೇ.? ತಪ್ಪು ಮಾಡಲಿಲ್ಲ ಎಂಬುದು ಪ್ರಶಂಸನಾರ್ಹವಾದರೆ,ತಪ್ಪುಗಳನ್ನು ಅಧಿಕಾರವಿದ್ದೂ ನಿಲ್ಲಿಸಲಿಲ್ಲ ಎಂಬುದು ಅಷ್ಟೇ ಖಂಡನೀಯ. ಹೀಗಿದ್ದೂ ಅವರನ್ನು ಪ್ರಾಮಾಣಿಕ ಎಂದು ಯಾವ ಅರ್ಥದಲ್ಲಿ ಕರೆಯಬಹುದು.?ಭ್ರಷ್ಟಾಚಾರ ಮಾಡಿಲ್ಲ ಎಂದು ಎದೆಯುಬ್ಬಿಸಿ ಸಿಂಗ್ ಹೇಳುತ್ತಾರೆ. ಅವರೊಬ್ಬ ಸಾಮಾನ್ಯ ರಾಜಕಾರಣಿಯಾಗಿದ್ದರೆ ಅವರನ್ನು ನಾವು ಪ್ರಶಂಸೆ ಮಾಡಬೇಕು ನಿಜ. ಒಬ್ಬ ಪ್ರಧಾನಿಯಾಗಿ ಅವರು ಯಾವ ನೈತಿಕತೆಯಲ್ಲಿ ಹೀಗೆ ಹೇಳಿದರೋ ತಿಳಿಯದು. ಭ್ರಷ್ಟಾಚಾರ ಮಾಡದೇ ಇರುವುದೇ ಒಂದು ಸಾಧನೆ ಎಂದು ತಿಳಿದಿದ್ದಾರೆ ಪಾಪ. ಪ್ರಧಾನಿಯಾಗಿ ಭ್ರಷ್ಟಾಚಾರ ಹತ್ತಿರವೂ ಸುಳಿಯಬಾರದು. ಇಂತಿರುವಾಗ ನಾನು ಮಾಡಿಲ್ಲ ಎಂದು ಹೇಳುವುದರಲ್ಲಿ ಏನು ಅರ್ಥ..?? ಸರಿ ಈ ದೇಶದಲ್ಲಿ ಅದ್ದೂ ಕೂಡ ಒಂದು ಸಾಧನೆ ಎಂದು ಪರಿಗಣಿಸೋಣ. ಒಬ್ಬ ಪ್ರಧಾನಿಯಾಗಿ ಭ್ರಷ್ಟಾಚಾರ ತಡೆಯಲು ಅವರು ಮಾಡಿದ ಕನಿಷ್ಟ ಪ್ರಯತ್ನವಾದರೂ ಏನು.? ಇಷ್ಟಿದ್ದೂ ಮಾನ್ಯ ಮನಮೋಹನ್ ಸಿಂಗ್ ಅವರೇ ನಿಮ್ಮನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ..?? ನೀವೊಬ್ಬ ಪ್ರಾಮಾಣಿಕ ಎಂದು ಹೇಗೆ ಕರೆಸಿಕೊಳ್ಳುತ್ತೀರಿ..?
ಇನ್ನು ಹೇಳಿ ಸಿಂಗ್ ಅವರೇ ನೀವು ಯಾವ "ಶಿಖಂಡಿ"ಗಿಂತ ಕಮ್ಮಿ..?

Sunday, May 27, 2012

ದೇಶಕ್ಕೆ ಎನೂ ಮಾಡದೇ ಇರುವುದೂ ಒಂದು ರೀತಿಯ ದೇಶದ್ರೋಹವೇ. ಇಂಥ ಸಂಧರ್ಭದಲ್ಲಿ ನಮ್ಮಲ್ಲನೇಕರು ದೇಶದ್ರೋಹಿಗಳು ಎನ್ನುವ ಮಾತು ಸತ್ಯ.ಒಂದು ವೇಳೆ ಈಗ ಗಾಂಧೀಜಿ ಬದುಕಿದ್ದು ದೇಶಸೇವೆ ಮಾಡುತ್ತಿದ್ದರೆ ಇಂದಿನ ಬುದ್ಧಿಜೀವಿಗಳು ಅದರಿಂದ ಅವರಿಗಾಗುವ ಲಾಭವೇನು ಎಂದು ಲೆಕ್ಕ ಹಾಕಿ, ಪತ್ರಿಕೆಯೊಂದರಲ್ಲಿ ಪುಟಗಟ್ಟಲೆ ಲೇಖನ ಬರೆಯುತ್ತಿದ್ದರು. ಟಿವಿ ಮಾಧ್ಯಮಗಳಲ್ಲಿ  ಒಂದುವರೆ ಗಂಟೆ(ಜಾಹೀರಾತು ಸಮೇತ) ಅವರ ದೇಶಪ್ರೇಮದ ಮಾಪನ ನಡೆಯುತ್ತಿತ್ತು. ಸಾಮಜಿಕ ತಾಣಗಳಾದ ಫೇಸ್ ಬುಕ್,ಟ್ವಿಟ್ಟರ್ ಗಳಲ್ಲಿ ಅದೆಷ್ಟೋ ಮಾತಿನ ಯುದ್ಧವೇ ನಡೆದು ಹೋಗುತ್ತಿತ್ತು. ಇಂಥ ದೇಶವಾಸಿಗಳನ್ನು ಬದಲಿಸಲು ಸಾಧ್ಯವೇ..???
     ದೇಶವನ್ನು ಬದಲಿಸಲು ಹೊರಟವರಿಗೆ ಅರಿವಾಗಬೇಕಾದ ಸತ್ಯ ಎನೆಂದರೆ ಅವರು ಬದಲಿಸಬೇಕಾದ್ದು ದೇಶವನ್ನಲ್ಲ, ಬದಲಾಗಿ ಈ ದೇಶವಾಸಿಗಳನ್ನು. ದಾರಿಯಲ್ಲಿ ನೀವು ನಡೆದು ಹೋಗುವಾಗ ಕಂಡ ಕಸವನ್ನು ಎತ್ತಿ ಬುಟ್ಟಿಗೆ ನೀವು ಹಾಕಿದಿರಾದರೆ ಸುತ್ತಲಿನವರು ನಿಮ್ಮನ್ನು ಹುಚ್ಚ ಎಂದು ಛೇಡಿಸುತ್ತಾರೆ. ಅದು ವಾಸ್ತವ. ದೇಶವನ್ನು ಬದಲಿಸುತ್ತೇನೆ ಎಂದು ಹೊರಟವರ ಅತ್ಮಸ್ತೈರ್ಯವನ್ನೆ ಕುಗ್ಗಿಸುವ ಪ್ರಯತ್ನ ಇಂದಿನ ಬುದ್ಧಿಜೀವಿಗಳು ಬಹಳ ಘನಕಾರ್ಯದಂತೆ ಗೌರವಯುತವಾಗಿ ಮಾಡುತ್ತಾರೆ. ಇಂಥವರ ಜತೆ ವಾದ ಮಾಡುವುದು ಕೂಡ ಅಸಾಧ್ಯ. ಯಾಕೆಂದರೆ  ಇವರುಗಳು ಮಾತಿನ ಮಲ್ಲರು. ತಾನೊಬ್ಬ ಅತಿಮಾನುಶ ಬುದ್ಧಿಜೀವಿ ಎಂದು ತೋರಿಸಿಕೊಳ್ಳುವ ತವಕ ಇವರಲ್ಲಿ ಇರುತ್ತದೆ.
      ಈ ಮಾತುಗಳು ನಾನು ಯಾಕೆ ಹೇಳುತ್ತಿದ್ದೇನೆಂದರೆ "ಸತ್ಯಮೇವ ಜಯತೆ" ಎನ್ನುವ ಕಾರ್ಯಕ್ರಮವೊಂದನ್ನು ಚಿತ್ರರಂಗದ ನಟ ಆಮೀರ್ ಖಾನ್ ನಡೆಸಿಕೊಂಡು ಬರುತ್ತಿದ್ದಾರೆ. ದೇಶದ ಸಮಸ್ಯೆಗಳ ಮೇಲೊಂದು ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನವೊಂದನ್ನು ಆತ ಮಾದಿದ್ದಾನೆ. ನನಗಂತೂ ಆತನ ಪ್ರಯತ್ನದಲ್ಲಿ ಯಾವ ಹುಳುಕೂ ಕಾಣಿಸುತ್ತಿಲ್ಲ. ಹಣವೊಂದೇ ಅವನಿಗೆ ಮುಖ್ಯವಲ್ಲ ಎಂಬುದನ್ನು ಆತನನ್ನು ಸರಿಯಾಗಿ ಅವಲೋಕಿಸಿದರೆ ತಿಳಿದೀತು.ಇತ್ತೀಚೆಗೆ ಸಾಮಾಜಿಕ ಕಳಕಳಿಯುಳ್ಳ ಆತನ ಚಿತ್ರಗಳು ಅನೇಕವನ್ನು ನಾವು ನೋಡಿದ್ದೇವೆ. ಹಜಾರೆ ದಿನಗಟ್ಟಲೆ ಉಪವಾಸ ಕುಳಿತಾಗ ಯಾವೊಬ್ಬ ನಟನಾಗಲೀ, ಗಣ್ಯನಾಗಲೀ ಅತ್ತ ಸುಳಿಯಲಿಲ್ಲ. ಆಮೀರ್ ಖಾನ್ ಹಜಾರೆಯೊಂದಿಗೆ ಸಮಯ ಕಳೆದು ದೇಶಕ್ಕಾಗೆ ಕೈಜೋಡಿಸಿದ್ದು ಸುಳ್ಳಲ್ಲ.
ಏನೇ ಇರಲಿ,ಆತನೊಬ್ಬ ಭಾರತೀಯ, ದೇಶದ ಬಗ್ಗೆ ಮಾತನಾದುವ ಹಕ್ಕು ಅವನಿಗೆ ಇದೆ ಎಂಬುದು ನಾವು ಒಪ್ಪಲೇಬೇಕಾದ ಸತ್ಯ. ಆ ಹಕ್ಕನ್ನು ಅವನಿಂದ ಕಸಿಯಲು ನಾವ್ಯಾರು ನೀವ್ಯಾರು..??
          ಕಳೆದ ಮೂರ್ನಾಲ್ಕು ಅಧ್ಯಾಯಗಳಲ್ಲಿ ಅನಾವಶ್ಯಕ ಮತ್ತು ನಿರುಪಯೋಗವಾದ್ದನ್ನು ಯಾವುದನ್ನೂ ಆತ ಹೇಳಿಲ್ಲ ಅಂದುಕೊಳ್ಳುತ್ತೇನೆ. ಹೀಗಿದ್ದಮೇಲೂ ಟೀಕೆಗಳು ನಿಂತಿಲ್ಲ. ಹಣಕ್ಕಾಗಿ ಆತ ಮಾದುತ್ತಿದ್ದಾನೆ ಎಂದು ಟೀಕಾಕಾರರು ಮಾಡುತ್ತಿರುವ ಆರೋಪ ನಿರಾಧಾರ. ನಿಜ ಜಾಹೀರಾತುದಾರರಿಂದ ಅವನಿಗೆ ಹಣ ಬರುತ್ತಿರಬಹುದು. ಆದರೆ ಈ ಕಾರ್ಯಕ್ರಮಕ್ಕಾಗಿ ಆತ ಮಾಡುತ್ತಿರುವ ಖರ್ಚಿನ ಬಗ್ಗೆ ಯಾರಿಗಾದರು ಗೊತ್ತೇ..?? ಕ್ಯಾಮೆರಾ ಹಿಡುಕೊಂಡು ದೇಶಸುತ್ತುವ ಆತನ ತಂಡ ಪಡುತ್ತಿರುವ ಕಷ್ಟ ಏನು ಅಂತ ಗೊತ್ತೇ..? ಇದಕ್ಕೆಲ್ಲಾ ತಗಲುವ ಖರ್ಚು ಎಲ್ಲಿಂದ ಬರಬೇಕು..?? ಜಾಹಿರಾತಿನಿಂದ ಬರುವ ಹಣ ಅದಕ್ಕಾಗಿ ಉಪಯೋಗಿಸುತ್ತಿರಬಹುದು ಆಮೀರ್. ಜಾಹೀರಾತು ಇಲ್ಲದೆ ಕಾರ್ಯಕ್ರಮ ನಡೆಸುವ ಅನಿವಾರ್ಯತೆ ಏನಿದೆ? ಅಥವಾ ಹಣ ಅವನ ಜೇಬಿನಿಂದ ಭರಿಸಲಿ ಎಂದು ಯಾವುದಾದರು ಬುದ್ಧಿಜೀವಿ ವಾದಿಸಿದರೆ ಆ ಜೀವಿ ದೇಶಕ್ಕಾಗಿ ವಿನಿಯೋಗಿಸಿದ ಹಣವೆಷ್ಟು ಎಂಬುದನ್ನು ಪರಾಮರ್ಶಿಸಲಿ.
         ಆಮೀರ್ ಖಾನ್ ವ್ಯವಸ್ತೆಯನ್ನು ಬದಲಿಸಬೇಕೆಂದು ಹೊರಟಿದ್ದಾನೆ.ನಿಜ ಅಲ್ಲಿ ಹುಳುಕಿದೆ. ಆದ್ರೆ ಆತ ನಿಜವಾಗಿಯೂ ಬದಲಿಸಬೇಕಾದು ಈ ದೇಶದ ಜನರನ್ನು,ಅವರ ಮನಸ್ಸನ್ನು. ಪ್ರತಿಯೊಂದನ್ನು ಲಾಭನಷ್ಟದ ದೃಷ್ಟಿಕೋನದಿಂದಲೇ ಅಳೆಯುವ ಈ ದೇಶವಾಸಿ ಅನಾಗರೀಕ ಬುದ್ಧಿಜೀವಿಗಳನ್ನು ಬದಲಿಸಬೇಕಾದ ಅನಿವಾರ್ಯತೆ ಇದೆ.ಇಲ್ಲದೇ ಹೋದರೆ ಈ ದೇಶ ಹೀಗೇ ಉಳಿಯಲಿದೆ. ಮಗು ಹುಟ್ಟುವಾಗೆಲೇ ಅದರ ಮುಂದೆ ಈ ವ್ಯವಸ್ಥೆ ವಾತಾವರಣ ಇರುತ್ತದೆ. ಉತ್ತಮ ಸಮಾಜ,ದೇಶ ಹೇಗಿರುತ್ತದೆ ಎಂಬ ಅರಿವು ಆ ಮಗೂಗೆ ಇರಲ್ಲ. ಹಾಗಿರುವಾಗ ಆ ಮುಗು ಅನಾಗರಿಕ ಸಮಾಜದ ಅಂಗವಾಗುತ್ತದೆಯೇ ಹೊರತು, ಸಮಾಜದಲ್ಲಿ ನಾಗರೀಕತೆಯ ಬೀಜ ಬಿತ್ತನೆ ಅದರಿಂದ ಅಸಾಧ್ಯ. ದೇಶವಾಸಿಗಳೇ ದಯವಿಟ್ಟು ಎಲ್ಲವನ್ನೂ ಲಾಭನಷ್ಟದ ದೃಷ್ಟಿಕೋನದಿಂದ ಅಳೆಯುವುದನ್ನು ಬಿಟ್ಟುಬಿಡಿ. ಪ್ರತಿಯೊಬ್ಬರೂ ಬುದ್ಧಿಜೀವಿಗಳೇ ಆದರೆ ನಿಮ್ಮ ಬುದ್ಧಿಯ ಅತಿಪ್ರದರ್ಶನದ ಅಗತ್ಯ ದೇಶಕ್ಕೆ ಇಲ್ಲ. ಸಾಧ್ಯವಾದರೆ ಆಮೀರ್ ನಂತೆ ದೇಶಕ್ಕೆ ನಿಮ್ಮಿಂದಾಗುವ ಸೇವೆ ಸಲ್ಲಿಸಿ.ನಿಮ್ಮನ್ನು ನೀವು ಬದಲಿಸಿಕೊಳ್ಳಿ. ಇಲ್ಲಾಂದ್ರೆ ಚಾನೆಲ್ ಚೇಂಜ್ ಮಾಡಿ......

Monday, March 26, 2012

     ಡಾನ್ ನ ರೋಮನಂತೆ
ಜಂಗ್ಲಿ ಬಿಲ್ಲಿ ಅವಳಲ್ಲ. ರಾಜ್ ನ ಸನ್ನಿರೀಟ ಸಿಮ್ರಾನ್ ನಂತೆ ಮುಗ್ಧಳೂ ಅವಳಲ್ಲ.
ಜಾಕ್ ನ ರೋಸ್ ನಂತೆ ಅಪ್ರತಿಮ ಸುಂದರಿಯೂ ಅವಳಲ್ಲ. ನಿನ್ನಿಂದಲೇ ನಿನ್ನಿಂದಲೇ,, ಎಂದು ಅವಳೊಂದಿಗೆ ನಾನು ಯಾವತ್ತೂ ಪ್ರಣಯ ಗೀತೆ ಹಾಡಿಲ್ಲ. ಯಾವುದೋ ಕಾಡಿನೊಳಗೆ ಕ್ರೂರ ಮೃಗಗಳಿಂದ ಅವಳನ್ನು ರಕ್ಷಿಸಿ ಅವಳೊಂದಿಗೆ ಪಕ್ಕಾ ಶ್ರೀರಾಮನಂತೆ ರಾತ್ರಿಯನ್ನೂ ಕಳೆದಿಲ್ಲ.
   ಇಂತಿದ್ದರೂ ಅವಳೊಂದು ದಿನ ನನಗೆ ಪರಿಚಯವಾದಳು. ನನ್ನ ಜೀವನದ ಆರಂಭವೇನೋ ಎಂಬಂತೆ ನನಗಾಗ ಭಾಸವಾಯಿತು. ಅವಳ ಸೌಂದರ್ಯ ವರ್ಣನಾತೀತವೇನು ಅಲ್ಲ ಎಂದು ನನಗಾವತ್ತೂ ಅನಿಸಿಲ್ಲ. ಯಾಕೆಂದರೆ ಅವಳನ್ನು ವರ್ಣಿಸಲು ನನ್ನಿಂದ ಅಸಾಧ್ಯ. ಪ್ರೇಮ ಕುರುಡು ಅಂತಿದ್ದ ನಾನು ಅವಳ ಕಂಡ ಮೇಲೆ ಕಣ್ಣು ರೆಪ್ಪೆ ಮುಚ್ಚಿಲ್ಲ. ಹುಡುಗಿಯನ್ನು ಹೆಂಡಕ್ಕೂ ಪ್ರೀತಿಯನ್ನು ನಶೆಗೂ ಹೋಲಿಸುವವರಿದ್ದಾರೆ. ನನಗವಳು ನಶೆ ಏರಿಸಿಲ್ಲ. ಬದಲಾಗಿ ಇಹದ ಗೊಡವೆಯನ್ನು ಮತ್ತಷ್ಟು ಹೆಚ್ಚಿಸಿದ್ದಾಳೆ. ಜೀವಕ್ಕೆ ಬಲ ತುಂಬಿ ಜೀವನದ ಆಸೆಗೆ ಕಿಚ್ಚು ಹೊತ್ತಿಸಿದ್ದಾಳೆ.
      ನಾನವಳಿಗೆ ದಿನಕ್ಕೆ ಆರು ಬಾರಿ ಫೋನ್ ಮಾಡುವುದಿಲ್ಲ. ಇಪ್ಪತ್ನಾಕು ಗಂಟೆ ಮೆಸೇಜ್ ಕಳಿಸುವುದಿಲ್ಲ, ವಾರಕ್ಕೆ ಮೂರು ಬಾರಿ ಪಾರ್ಕು,ಥಿಯೇಟರ್ ಎಂದು ಸುತ್ತುವುದೂ ಇಲ್ಲ,  ಅವಳಿಗದು ಇಷ್ಟವೂ ಇಲ್ಲ.ಆದರು ಅವಳು ನನ್ನ ಹೃದಯದಲ್ಲಿ ನೆಲೆಸಿದ್ದಾಳೆ. ಅವಳನ್ನು ನೆನೆಸದ ಕ್ಷಣದಲ್ಲೇ ಎದೆ ಬಡಿತ ಕೂಡ ನಿಲ್ಲುತ್ತದೆ ಎಂಬ ಅರಿವು ನನಗಿದೆ. ಪ್ರೀತಿಯಲ್ಲಿ ಏನೇನೋ ಕಳೆದುಕೊಂಡವರು ಇದ್ದಾರಂತೆ. ಆದರೆ ನನ್ನ ಪ್ರಕಾರ ಪ್ರೀತಿಯಿಂದ ನಾವು ಎಲ್ಲವನ್ನು ಗಳಿಸಿಕೊಳ್ಳುತ್ತೇವೆ. ಇಲ್ಲಿ ಪ್ರತಿಯೊಂದೂ ಆನಂದವನ್ನೇ ನೀಡುತ್ತದೆ.
     ಅವಳೊಂದು ಮರೆಯಲಾಗದ ಕವಿತೆ. ಪ್ರತಿ ಬಾರಿ ಓದಿದಾಗಲೂ ಮನ ಮತ್ತಷ್ಟು ಉಲ್ಲಾಸ, ಉತ್ಸಾಹಗೊಳ್ಳುತ್ತದೆ. ಜೀವನ ಹೀಗೂ ಉಂಟೆ ಎಂದು ನನಗರಿವಾದದ್ದು ಅವಳಿಂದಲೇ. ನನ್ನ ಪ್ರತಿ ಸಮಸ್ಯೆಗೂ ಅವಳೇ ಪರಿಹಾರ. ನನ್ನ ಜೀವಕ್ಕೆ ಅವಳೇ ಆಧಾರ. ಮಂತ್ರ ಮುಗ್ಧನಾಗಿ ಅವಳ ಮಾತುಗಳನ್ನು ಕೇಳುವಾಗ ಸರಣಿ ಬಾಂಬ್ ಸ್ಪೋಟಿಸಿದರೂ ನನಗೆ ಬಹುಶಃ ಗೊತ್ತಾಗಲಾರದು. ಭಾರಿ ಧೈರ್ಯವಂತೆಯೇನು ಅವಳಲ್ಲ. ಹೇಡಿಯೂ ಅವಳಲ್ಲ, ನನ್ನಂತೆಯೇ ಅವಳೂ ಒಬ್ಬ ದೇಶಪ್ರೇಮಿ. ನಾವಿಬ್ಬರೂ ಮಾತಾಡುವಾಗ ಹೆಚ್ಚಿನ ವಿಶಯ ದೇಶದ್ದೇ ಆಗಿರುತ್ತದೆ. ಸಾಯುವುದಾದರೆ ದೇಶಕ್ಕಾಗಿ ಆಗಿರಬೇಕು ಎಂದು ಅವಳ್ಯಾವತ್ತೂ ಹೇಳುತ್ತಾಳೆ. ನೀನು ಭಾರತೀಯ ಎಂದು ಹೆಮ್ಮೆ ಪಡು ಜೊತೆಗೆ ನಿನ್ನನ್ನು ಹಡೆದ ಭಾರತಾಂಬೆಯೂ ನಿನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡು. ಎನ್ನುವುದು ಅವಳ ಮನದಾಳದ ನುಡಿ.
   ಅವಳ ವಿಶೇಷತೆ ಎನೆಂದರೆ ಅವಳಿಗೆ ಜೀವನದಲ್ಲಿ ಇರುವ ಸಮಸ್ಯೆ ಎಲ್ಲ ಪರರದ್ದೇ, ರಾಜಕೀಯ ಸೇರು ಎಂದು ನಾನವಳನ್ನು ರೇಗಿಸಿದ್ದುಂಟು. ಈಗಿನ ಯುವಕ/ತಿ ಯರಂತೆ ಅವಳು ರಾಜಕೀಯವನ್ನು ದೂರುವುದಿಲ್ಲ, ನಾವದನ್ನು ಬದಲಿಸೋಣ ಎಂಬುದು ಅವಳ ನಿಲುವು.ಅದಕ್ಕಾಗಿ ನನ್ನನ್ನವಳು ಹುರಿದುಂಬಿಸುತ್ತಾಳೆ. ಅವಳ ಯಾವ ಗುಣವನ್ನು ನಾನು ಅತಿ ಹೆಚ್ಚು ಇಷ್ಟಪಡುತ್ತೇನೋ ಗೊತ್ತಿಲ್ಲ ಒಂದಂತೂ ನಿಜ ಅವಳೊಂದಿಗೆ ನಾನು ಇಡೀ ಜಗತ್ತನ್ನೇ ಇಷ್ಟಪಡುತ್ತೇನೆ.ಅವಳು ಹೇಳುವ ಅನೇಕ ವಿಶಯಗಳು ತತ್ವವಾದಗಳಾಗಿದ್ದರೂ ನಾನದನ್ನು ಆನಂದಿಸುತ್ತೇನೆ,ಅನುಸರಿಸಲು ಬಯಸುತ್ತೇನೆ. ಆ ಜ್ವಾಲೆಯನ್ನು ಅವಳು ನನ್ನಲ್ಲಿ ತುಂಬಿದ್ದಾಳೆ. ಅವಳೊಬ್ಬ ತತ್ವಜ್ನಾನಿ ಎಂದು ಕರೆದರೂ ತಪ್ಪಾಗಲಾರದು, ಇಹ ಮತ್ತು ಪರದ ವ್ಯತ್ಯಾಸವನ್ನು ವ್ಯಾಖ್ಯಾನಿಸಿ ಅದರ ಮಹತ್ವವನ್ನು ನನ್ನೊಳಗೆ ತುಂಬಲು ಯತ್ನಿಸಿದಳು. ಇಹದಲ್ಲಿದ್ದುಕೊಂಡು ನಾನು ಮಾಡಬೇಕಾದ ಕರ್ತವ್ಯಗಳನ್ನು ನನಗವಳು ಭೋದಿಸಿದಳು.
   ಅವಳಲ್ಲೊಂದು ವಿವೇಕಾನಂದ, ಮದರ್ ಥೆರೇಸಾ, ಸುಭಾಸ್ ಚಂದ್ರ ಬೋಸ್ ನಾನು ಕಂಡದ್ದು ಸುಳ್ಳಲ್ಲ. ಇವರೆಲ್ಲರ ಸಮ್ಮಿಲನ ಅವಳಿದ್ದಂತೆ ಎಂದು ನನಗೆ ಅಗಾಗ ಅನಿಸುವುದುಂಟು. ಅವಳ ದೃಷ್ಟಿ, ಮತ್ತು ದೂರಾಲೋಚನೆಗಳು ನಮ್ಮಲನೇಕರಿಗೆ ಬರಲು ಸಾಧ್ಯವಿಲ್ಲೆವೇನೋ. ಬಂದಿದ್ದರೆ ಸ್ಥಿತಿ ಹೀಗಿರುತ್ತಿರಲಿಲ್ಲ. ಇರಲಿ ನಾನೇ ಪುಣ್ಯವಂತ ಎಂದು ನನ್ನ ಮನ ಆಗಾಗ ಗುನುಗುವುದು. ನನ್ನನ್ನು ನಾನು ಅದಕ್ಕಿಂತ ಹೆಚ್ಚು ಹೇಗೆ ಕರೆದುಕೊಳ್ಳಲಿ..?
ಇನ್ನು ಮುಂದೆ ಹೇಳುವುದಾದರೆ ಎಲ್ಲ ಹೆಣ್ಣಿನಂತೆ ಅವಳಿಗೂ ಒಂಚೂರು ನಾಚಿಕೆ,ಲಜ್ಜೆ ಇತ್ಯಾದಿ ಆಗಾಗ ಬರುವುದುಂಟು. ಅವಳೊಬ್ಬ ಪಾಕಪ್ರವೀಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವಳ ಕೈರುಚಿ ನನ್ನ ನಾಲಗೆಯನ್ನು ಚಪ್ಪರಿಸಿಕೊಂಡೇ ಇರುವಂತೆ ಮಾಡುತ್ತದೆ. ನಳನ ನಂತರ ಅವಳೇನೋ ಎಂಬಂತೆ ಅವಳ ಅಡುಗೆ. ದಿನವೂ ಅಲ್ಲದಿದ್ದರೂ ಹಲವು ಬಾರಿ ಆ ರುಚಿ ನೋಡುವ ಭಾಗ್ಯ ನನಗೆ ದೊರೆತಿದೆ.
  ಏನೇ ಆದರೂ ಅವಳೊಂದಿಗೆ ಕಳೆದ ಎಲ್ಲ ಕ್ಷಣಗಳೂ ಮಧುರ ಮತ್ತು ಮನ ಮೋಹಕ. ಇನ್ನು ಮುಂದೆಯೂ ಅಂಥ ಕ್ಷಣಗಳಿಗಾಗಿ ನನ್ನ ಮನ ಹಾತೊರೆಯುವುದು ಅಷ್ಟೇ ಸತ್ಯ. ನನ್ನ ಬಾಳಿನ ಬೆಳಕು, ದೀಪ, ಇನ್ನೂ ಏನೇನೋ ಕವಿಗಳಂತೆ ಹೇಳಲು ನನಗೆ ಬಾರದು. ನನ್ನ ಜೀವನಕ್ಕೆ ಜೀವ ತುಂಬಿದವಳು ಅವಳು, ಅಷ್ಟು ಮಾತ್ರ ನನ್ನಿಂದ ಹೇಳಲು ಸಾಧ್ಯ.  ಅವಳ ಮಾತುಗಳೇ ನನಗೆ ಚೈತನ್ಯ,ಹುರುಪು. ಅವಳೊಂದಿಗೆ ನನ್ನ ಇಡೀ ಬದುಕನ್ನು ಸಾಗಿಸುವ ಮಹದಾಸೆಯನ್ನು ನಾನು ಹೊತ್ತುಕೊಂಡಿರುವೆ.

Saturday, February 25, 2012

                       ಯುವಜನಾಂಗದಲ್ಲಿನ ದೇಶಪ್ರೇಮ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆಯೇ.?? ಹೌದು ಎಂಬ ಸಂದೇಹ ಕಾಡುತ್ತಿದೆ. ಇದಕ್ಕೆ ಕಾರಣ ಅನೇಕ ಇರಬಹುದು.ಆದರೆ ಇದು ದೇಶಕ್ಕೆ ಒಳಿತಲ್ಲ ಎಂಬುದಶ್ಟೆ ಸತ್ಯ. 
ಕಳೆದ 1-2 ದಶಕದಲ್ಲಿ ನಾವು ಕೇವಲ ಬೆರಳೆಣಿಕೆಯಶ್ಟು ಯುವಕರನ್ನು ಸಮಾಜಮುಖಿಯನ್ನಾಗಿ ಕಂಡಿದ್ದೇವೆ. 
ಹಾಗಾದರೆ ಯುವಜನಾಂಗ ಹಳಿ ತಪ್ಪುತ್ತಿರುವುದೆಲ್ಲಿ...???
                        ಜಾಗತೀಕರಣ ಎಂಬ ಕಲ್ಪನೆ ಭಾರತ ಪ್ರವೇಶಿಸಿದಾಗ ಇಲ್ಲಿ ಅನೇಕ ಬದಲಾವಣೆಗಳು ಉಂಟಾದವು. ಅದರಲ್ಲೂ ಜನಸಂಖ್ಯೆಯಲ್ಲಿ ಉನ್ನತ ಸ್ಥಾನ ಹೊಂದಿರುವ ಭಾರತಕ್ಕೆ ಅದು ವರವಾಗಿ ಪರಿಣಮಿಸಿತು. ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಅದು ಪರಿಹಾರ ಕೊಟ್ಟಿತು. ಅದರಲ್ಲೊ ನಮ್ಮ ಯುವಜನಾಂಗ ಜಾಗತೀಕರಣವನ್ನು ಬಹಳವಾಗಿ ಒಪ್ಪಿಕೊಂಡಿತು. ಯಾಕೆಂದರೆ ಯುವಪೀಳಿಗೆಗೆ ಅದು ಹೊಸ ಆಯಾಮಗಳನ್ನು ನೀಡುವುದರಲ್ಲಿ ಯಶಸ್ಸು ಕಂಡಿತು. ಜಾಗತೀಕರಣದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಪರಿಚಯವಾಗುತ್ತಿದಂತೆ ಯುವ ಪೀಳಿಗೆ ಅದರತ್ತ ಆಕರ್ಶಣೆಗೊಂದಿದ್ದು ಸುಳ್ಳಲ್ಲ. ಯಾಕೆಂದರೆ ಆ ಜಗತ್ತು ಒಬ್ಬ ಯುವಕ/ತಿ ಬಯಸುವ ಎಲ್ಲ ಸುಖ ಸೌಭಾಗ್ಯಗಳನ್ನು ಅವರಿಗೆ ನೀಡಿತ್ತು. ಇಲ್ಲಿಂದಲೇ ಪೀಳಿಗೆ ದೇಶದತ್ತ ಗಮನ ಹರಿಸುವುದನ್ನು ಮರೆತು ಬಿಟ್ಟಿತ್ತು.
          ವೃತ್ತಿಪರತೆ ಮತ್ತು ದೇಶಪ್ರೇಮವನ್ನು ತೂಗಿದಾಗ ಯುವಜನಾಂಗಕ್ಕೆ ವೃತ್ತಿಯೇ ಮೇಲೆನಿಸಿದ್ದು ದುರದೃಶ್ಟ್ಕರ. ಇದೇ ವೃತ್ತಿಪರತೆ ಅವರ ದೇಶಪ್ರೇಮವನ್ನು ನುಂಗಿ ಹಾಕಿ ಸಮಾಜದಿಂದ ದೂರ ಕೊಂಡೊಯ್ದುಬಿಟ್ಟಿದೆ. ಒಬ್ಬ ವೃತ್ತ್ತಿಪರ ಯುವಕನನ್ನು ನಾವು ನೋಡಿದಾಗ ನಮಗೆ ಅವನ ಜೀವಶೈಲಿಯ ಪರಿಚಯ ಅಗುತ್ತದೆ. ಆತ ಬೆಳಗಾಗೆದ್ದು ಆಫೀಸ್ ಗೆಂದು ಹೊರಟರೆ ಮನೆ ತಲುಪುವುದು ರಾತ್ರಿಯಾದ ಮೇಲೆಯೇ. ಸಮಾಜದತ್ತ ಅವನ ದೃಶ್ಟಿ ಯಾವ ಕಾರಣಕ್ಕು ಬೀಳುವುದಿಲ್ಲ. ಸಮಾಜದ ಯಾವೊಂದು ವ್ಯಕ್ತಿಯೊಂದಿಗೆ  ಸಂಪರ್ಕ ಕೂಡಾ ಅವನಿಗೆ ಹೆಚ್ಚು ಕಡಿಮೆ ಇರುವುದಿಲ್ಲ ಎಂದೇ ಹೇಳಬಹುದು. ಇಂತಿರುವ ಒಬ್ಬ ವ್ಯಕ್ತಿ ದೇಶಪ್ರೇಮನ್ನು ಹೇಗಾದರೂ ಮೈಗೂಡಿಸಿಯಾನು...?? 
          ನಮ್ಮಲ್ಲಿರುವ ಅಸಹ್ಯ ರಾಜಕಾರಣಗಳು ಕೂಡ ಒಂದು ಕಾರಣವಾಗಬಲ್ಲುದು. ಆದರೆ ಅದು ಸಕಾರಣವಲ್ಲ. ಒಬ್ಬ ಅಣ್ಣಾ ಹಜಾರೆ ಬಂದಾಗ ಅವರ ಹಿಂದೆ ಒಂದಶ್ಟು ಯುವಕರು ಬಂದು ಬೊಬ್ಬಿರಿದರು. ಹಜಾರೆ ಹೊಗುವ ಮೊದಲೇ ಇವರು ಮಾಯ. ಯಾಕೆಂದರೆ ಇವರು ಅಫೀಸ್ ಗೆ ರಜ ಹಾಕುವಂತಿಲ್ಲ. ಮಾತನಾಡಿಸಲು ಹೊರಟರೆ ಇವರು ರಾಜಕಾರಣಿಗಳನ್ನು ದೂರುತ್ತಾರೆ. ದೇಶ ಅವರಿಂದಲೇ ಹಾಳಾಗಿದೆ, ವಿದೇಶದಲ್ಲಿ ಹಾಗಿದೆ ಹೀಗಿದೆ ಎಂದೆಲ್ಲ ಹೇಳುವ ಇವರು ಒಂದು ಕ್ಶಣವೂ ದೇಶದ ಬಗ್ಗೆ ಯೋಚಿಸಿದವರಲ್ಲ. ಯೋಚಿಸಲು ಇವರ ಬಳಿ ಸಮಯ ಇಲ್ಲ.
             ದೇಶದ ಸಮಸ್ಯೆಗಳು ಇವರಿಗೆ ಯಾವತ್ತೂ ಒಂದು ಸಮಸ್ಯೆಗಳಾಗಿ ಕಂಡಿಲ್ಲ. ಸ್ಪರ್ಧಾತ್ಮಕ ಜಗತ್ತಿನ ವೃತ್ತಿಪರತೆ ದೇಶದ ಪ್ರಗತಿಗೆ ಮುಳುವಾಗಿದೆ ಎಂದರೂ ತಪ್ಪಾಗಲಾರದು. ಸೇವೆಗಿಂತ ಸಾಧನೆಯೇ ಮುಖ್ಯವಾದಾಗ ಸಮಾಜದ ಉನ್ನತಿ ಎಲ್ಲಿಂದ ಸಾಧ್ಯ..?? ಒಂದು ಕ್ಶಣ ಯೊಚಿಸಿ. ಭಗತ್ ಸಿಂಗ್,ಬೋಸ್,ಗಾಂಧಿ ಸಾಧನೆಯೇ ಜೀವನದ ಪರಮೋಚ್ಚ ಗುರಿ ಎಂದು ಭಾವಿಸಿದ್ದರೆ ನಾವು ಇಂದು ಹೀಗಿರಲು ಸಾಧ್ಯವಾಗುತ್ತಿತ್ತೇ..? ಹಣ ಮತ್ತು ಮೋಹಗಳು ಅವರನ್ನು ಬಂದಿಸಿದ್ದರೆ ನಮ್ಮ ಸ್ಥಿತಿ ಎನಾಗುತ್ತಿತ್ತು..??
        ವೃತ್ತಿಪರತೆ ಪ್ರತಿಯೊಬ್ಬ ಮನುಶ್ಯನಿಗೂ ಬೇಕು ಏಕೆಂದರೆ ಅದು ಹೊಟ್ಟೆಪಾಡು. ಆದರೆ ಅದು ಅತಿರೇಕವಾದಾಗ ಸಮಾಜದ ಅವನತಿ ಅಲ್ಲಿಂದ ಶುರುವಾಗುತ್ತದೆ. ಹಣದ ವ್ಯಾಮೋಹಕ್ಕಿಂತಲೂ ಇಂದಿನ ಯುವಜನಾಂಗ ಸಾಧನೆಯ ವ್ಯಾಮೋಹಕ್ಕೆ ಬಿದ್ದಿರುವುದು ಇತ್ತೀಚಿನ ದಿನಗಳಲ್ಲಿ ಸ್ಪಶ್ಟ. ಎಲ್ಲರಿಗೂ ನಾರಾಯಣಮೂರ್ತಿ,ಅಜೀಂ ಪ್ರೇಮ್ ಜಿ ಆಗುವ ತವಕ. 
                ಮಾಹಿತಿ ತಂತ್ರಜ್ನಾನದ ಈ ಯುಗದಲ್ಲಿ ಎಲ್ಲವು ಸುಲಭಸಾದ್ಯ. ಆದರೂ ಇಂದಿನ ಯುವ ಪೀಳಿಗೆಗೆ ದೇಶದ ಬಗ್ಗೆ ಯೋಚಿಸಲೂ ಸಮಯವಿಲ್ಲದ್ದು ಅತಿ ಬೇಸರದ ಸಂಗತಿ. ಯುವಕರೇ ದೇಶದ ಆಸ್ತಿ ಎಂದು ತಿಳಿದೂ ನಿರ್ಲಕ್ಶ್ಯ ವಹಿಸುತ್ತಿರುವುದು ದುರಾದೃಶ್ಟ. ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಅರಿತರೆ ದೇಶದ ಪ್ರಗತಿ ನಿಶ್ಚಿತ. ಆದರೆ ಆ ಕರ್ತವ್ಯಗಳನ್ನು ಬೇರೆಯವರು ಮಾಡಲು ಕಾದರೆ ಮಾಡುವವರು ಮುಂದೆ ಬರುವುದೇ ಇಲ್ಲ. ಇನ್ನಶ್ಟು ಕಾಲ ದೇಶಕ್ಕೆ ಇದೇ ದುಸ್ಥಿತಿ. 
               ಸಾಧನೆಗಿಂತ ಸೇವೆ ಮಾಡಿದಾಗಲೆ ಜೀವನ ಅರ್ಥಪೂರ್ಣ. ಯುವಜನಾಂಗ ಇದನ್ನು ಅರಿತು ದೇಶಪ್ರೇಮವನ್ನು ಮೈಗೂಡಿಸಿ ದೇಶಸೇವೆ ಮಾಡಲಿ ಎಂಬುದು ನಮ್ಮ ಆಶಯ. ಭಾರತ ಮಾತೆ ನಮಗೆಲ್ಲ ಆ ಶಕ್ತಿ ನೀಡಲಿ .



Friday, February 3, 2012

ಗೆಳೆಯರ ಬಳಗ 


ಜೀವನದ ಅತೀ ಸಂತೋಷದ ದಿನಗಳೆಂದರೆ ಅದು ವಿದ್ಯಾರ್ಥಿ ದಿನಗಳು. ಈ ಮಾತುಗಳು ನನ್ನದಲ್ಲ. ಯಾಕೆಂದರೆ ನಾನಿನ್ನೂ ಜೀವನವನ್ನು ನೋಡುವುದು ಸಾಕಷ್ಟಿದೆ. ಮೇಲಿನ ಮಾತುಗಳು ಅನುಭವಸ್ಥರ ಅನುಭವದ ಮಾತು. ಅಂದರೆ ಅವರ ಪ್ರಕಾರ ನಾವೀಗ ಜೀವನದ ಅತ್ಯುನ್ನತ ಸಂತಸವನ್ನು ಅನುಭವಿಸುತ್ತಿದ್ದೇವೆ. ನಿಜವೇ..?? ಹೌದು.
       ನೀವು ಕಾಲೇಜಿಗೆ ಬಂದ ಮೊದಲ ದಿನವನ್ನೊಮ್ಮೆ ಯೋಚಿಸಿ ನೋಡಿ. 5 ನಿಮಿಷದಲ್ಲಿ ಇಡೀ ಕ್ಲಾಸ್ ನಿಮ್ಮ ಗೆಳೆಯರಾಗಿಬಿಟ್ಟರು. ಎಲ್ಲರೂ ಒಂದೇ ನಾವೆಲ್ಲಾ ಭಾರತೀಯರು ಎಂದು ನಿರೂಪಿಸಿದ ಒಂದೇ ದಿನ ಅದು. ಅಲ್ಲಿಂದ ನಿಮ್ಮ ಜೀವನದ ಪ್ರತಿಯೊಂದನ್ನೂ ಮೆಲುಕು ಹಾಕುತ್ತಾ ಹೋದರೆ ಸಂತಸದ ದಿನಗಳೇ ಸಿಗುತ್ತಾ ಹೋಗುತ್ತವೆ. ಎಲ್ಲಿಯೂ igo,frustration ಗೆ ಜಾಗವಿಲ್ಲ. ದುಃಖ ಬಂದಾಗಲೂ ಆನಂದ ಉಂಟಾದಾಗಲೂ ನಿಮ್ಮ ಬಳಿ ಇದ್ದ ಗೆಳೆಯರನ್ನು ನೆನಪಿಸಿ. ಅವರು ಹೇಳಿದ ಉತ್ತೇಜನ,ಸಾಂತ್ವನಗಳನ್ನ ಬೇರೆ ಯಾರಿಂದಲೂ ನೀಡಲು ಸಾದ್ಯವಿಲ್ಲ. ಏಕತೆಗೆ ಇರುವ ಏಕಮಾತ್ರ ಉದಾಹರಣೆ ವಿದ್ಯಾರ್ಥಿಗಳು.
                ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿ ನಾನಗಿದ್ದಾಗ ನನ್ನ ಮೇಷ್ಟ್ರು ನನಗೆ ಯಾವಾಗಲು chocolate ಕೊಡ್ತಾ  ಇದ್ರು. ನಾನು ಅದಕ್ಕಾಗಿಯೇ ಶಾಲೆಗೆ ಹೋಗುತ್ತಿದ್ದೆ ಅಂದರೆ ತಪ್ಪಲ್ಲ. ಶಿಕ್ಷಣದ ಮಾಲ್ಯ ಅರಿಯದ ಬಾಲ್ಯ ಅದು. ಆದರೂ ಆ ದಿನಗಳು ಹಿತವನ್ನೇ ನೀಡಿದ್ದವು. ಟೀಚರ್ ಹೊಡೆದಾಗ ಅತ್ತು, ಮತ್ತೆ ಸಮಾಧಾನ ಮಾಡಿದಾಗ ಖುಷಿಪಟ್ಟು ಉಲ್ಲಾಸಗೊಂಡ ದಿನಗಳವು.
   ಪ್ರೌಢ ಶಾಲೆಗೆ ಸೇರಿಕೊಂಡಾಗ ಪ್ರೌಡತೆ ಬಂದಷ್ಟೇ ಉತ್ಸಾಹಗೊಂಡಿದ್ದೆ. ನಿಜವಾಗಿ ಅದಿನ್ನೂ ಬಂದಿಲ್ಲ. ಆ ಮೂರು-ನಾಲ್ಕು ವರುಷ ಅತಿಯಾದ ದ್ವಂದ್ವದಲ್ಲಿ ಕಳೆದಿದ್ದೆ. ಒಂದಷ್ಟು ಗೆಳೆಯರ ಜೊತೆ ಸೇರಿ ಕೆಲವಷ್ಟು ಕಿತಾಪತಿ ಮಾಡಿ ಪ್ರಾಂಶುಪಾಲರ ಕೊಠಡಿಗೆ ದಿನಾ ಭೇಟಿ ನೀಡುತ್ತಿದ್ದೆ.  ಅವರಾದರೂ ಉದ್ದುದ್ದ ಭಾಷಣ ಬಿಟ್ಟು ನಮ್ಮನ್ನು ಮತ್ತಷ್ಟು ರೇಗಿಸುತ್ತಿದ್ದರು. ಆದರೆ ನಾವಾದರು ಏನು ಮಾಡಿಯೆವು..?? ಸಪ್ಪೆ ಮೋರೆ ಹಾಕಿ ಪುನಃ ತರಗತಿಯಲ್ಲಿ ಕುಳಿತುಕೊಳ್ಳದೆ ವಿಧಿಯಿಲ್ಲ. ನಾನು ನನ್ನ ಪ್ರೌಡ ಶಿಕ್ಷಣ ಹಾಸ್ಟೆಲ್ನಲ್ಲಿ ಮಾಡಿದ್ದಾದರಿಂದ ನಮ್ಮ ಮೇಷ್ಟ್ರ ಮನೆಗಳೂ ಪಕ್ಕದಲ್ಲೇ ಇದ್ದವು. ರಾತ್ರಿಯಾಗುತ್ತಿದ್ದಂತೆ ಒಂದಷ್ಟು ನಾವು ಗೆಳೆಯರು ಸೇರಿ ಅವರ ಮನೆಗೆ ಪಟಾಕಿ ಎಸೆಯುವುದು,,ಕಸದ ಬುಟ್ಟಿ ಎಸೆಯುವುದು ಮಾಡುತ್ತಿದ್ದೆವು. ಅನೇಕ ಬಾರಿ ನನ್ನ ತಂದೆಗೂ ನನ್ನಿಂದಾಗಿ ಮಂಗಳಾರತಿ ಆಗಿದ್ದುಂಟು. ಅಂತೂ ಇಂತೂ ಪ್ರೌಢ ಶಾಲೆ ಮುಗಿದಾಗ ಆದ ಸಂತಸ ಅಷ್ಟಿಷ್ಟಲ್ಲ. ನಿಜವಾದ ಕಾರಣ ನಾನಿನ್ನು ಕಾಲೇಜು ಸೇರುತ್ತೆನೆಂದು. 
       ಪ್ರಥಮ ಪಿಯುಸಿಗೆಂದು ಸುಬ್ರಹ್ಮಣ್ಯಕ್ಕೆ ತಂದೆ ನನ್ನನ್ನು ಸೇರಿಸುವಾಗ ಈ ಬಾರಿಯಾದರೂ ಯಾವುದೇ ಕಿತಾಪತಿ ಮಾಡಬೇಡ ಎಂದು ಪ್ರತ್ಯೇಕವಾಗಿ  ಹೇಳಿದ್ದರು. ಆದರೆ ಅದೆಲ್ಲ ಕಾಲೇಜಿನ ಹುಮ್ಮಸ್ಸಿನಲ್ಲಿ ಮಾಯವಾಗಿತ್ತು. ಪಕ್ಕದಲ್ಲೇ ಹರಿಯುವ ಕುಮಾರಧಾರ ನದಿಯ ಜುಳು ಜುಳು ನಿನಾದ ಕಿವಿ ಸೋಕುತ್ತಿತ್ತು. ಕೈ ಬೀಸಿ ಕರೆಯುತ್ತಿತ್ತು. 2  ಪಿಯುಸಿಯಂತು ಒಂದೇ ಒಂದು ದಿನ ಕ್ಲಾಸ್ ಕೇಳಿದ್ದು ನನಗೆ ನೆನಪಿಲ್ಲ. ಮನೆ ಬಿಟ್ಟು ಹೊರಟರೆ ಅದು ಸೀದಾ ನದಿ ತಟಕ್ಕಾಗಿರುತ್ತಿತ್ತು. 
    ಇಂತಿದ್ದ ನಾನು ಅದು ಹೇಗೋ ಪಿಯುಸಿ ಮುಗಿಸಿ ಡಿಗ್ರೀ ಗೆಂದು ಫಿಲೋಮಿನ ಕಾಲೇಜು ಪುತ್ತೂರು ಸೇರಿಕೊಂಡಾಗಲು ನನ್ನ ಕತೆ ಬಿನ್ನವಾಗಿರಲಿಲ್ಲ. ಮೊದಲೆರಡು ಸೆಮಿಸ್ಟರ್ dipartment  ನ  ಯಾವುದೇ ಉಪನ್ಯಾಸಕರನ್ನ ನನಗೆ ಪರಿಚಯವಾಗಿರಲಿಲ್ಲ. ನೋಡಿದರೆ ತಾನೇ..?? ಅಲ್ಲಿ ಬಳಿಯಲ್ಲಿ ಹೊಳೆ ಇಲ್ಲವಾದದ್ದರಿಂದ ಹುಡುಕಿಕೊಂಡು ಹೋಗ ಬೇಕಾಯಿತು.4 ನೆ ಸೆಮ್ ನಲ್ಲಿ ನೇತ್ರಾವತಿಗೆ ಈಜಲು ಹೋಗಿ ಒಬ್ಬ ಗೆಳೆಯನನ್ನು ಕಳೆದುಕೊಂಡೆ. ಅತಿಯಾಗಿದ್ದ ನನ್ನ ಮತ್ತು ಸಂಗಡಿಗರ ಉಪಟಳ ಅಲ್ಲಿಗೆ ಹೆಚ್ಚು ಕಮ್ಮಿ ಕೊನೆಗೊಂಡಿತು ಅಂದರೆ ತಪ್ಪಲ್ಲ. ಆದರೂ ಗೆಳೆಯರೊಂದಿಗೆ ಟೂರ್ ಇತ್ಯಾದಿಗಳು ತಪ್ಪಲಿಲ್ಲ. ಪ್ರತೀ ಶನಿವಾರ ಒಂದೊಂದು ಟ್ರಿಪ್ ಇರುತ್ತಿತ್ತು. ಹಾಗೋ ಹೀಗೋ ಡಿಗ್ರಿ ಮುಗಿಸಿದೆ.
   ಅಲ್ಲಿಗೆ ವಿದ್ಯಾರ್ಥಿ ಜೀವನ ಸಾಕು ಇನ್ನೇನಾದರು ಮಾಡೋಣ ಅಂತ ಕೆಲವು interview ಗೆ ಹೋದೆ ಅಲ್ಲೆಲ್ಲ ನಪಾಸ್ ಆದ ನಾನು ಮಾತ್ತೆ mca ಹೆಸರಲ್ಲಿ ನನ್ನ ವಿದ್ಯಾರ್ಥಿ ಜೀವನ ಆರಂಭಿಸಿದೆ.
ಈಗ ಮತ್ತೆ ಹೊಸ ಹುರುಪು ಉಲ್ಲಾಸಗಳಿಂದ ನನ್ನ ವಿದ್ಯಾರ್ಥಿ ಜೀವನವನ್ನು ಆನುಭವಿಸುತ್ತಿದ್ದೇನೆ. ಈ ಜೀವನ ನನಗೆ ಮರೆಯಲಾರದ ಹಲವು ಕ್ಷಣ ಗಳನ್ನೂ ಕೊಟ್ಟಿದೆ. ಅದಕ್ಕಾಗಿ ನಾನು ಎಂದಿಗೂ ಭಗವಂತನಿಗೆ ಆಭಾರಿ. ನನ್ನ ವಿದ್ಯಾರ್ಥಿ ಜೀವನವನ್ನು ಇಷ್ಟು ಸುಮಧುರವನ್ನಾಗಿಸಿದ ನನ್ನೆಲ್ಲ ಗೆಳೆಯರಿಗೂ ನಾನು ರಿಣಿ. ನನ್ನ ಮನವೆಂಬ ಪುಸ್ತಕದಲ್ಲಿ ಹರಿಯಲಾಗದ ಹಾಳೆಗಳಾಗಿ ಎಂದೆಂದಿಗೂ ಅವರನ್ನು ಕೊಂಡು ನಡೆಯುವೆ ನಾನು.