Wednesday, August 12, 2015

ಒಂದು ನಾಯಿ ಮರಿ ಕಥೆ...!
ಜೂಲಿ, ಈ ಕಥಾ ನಾಯಕ ನಾಯಿ ಮರಿಯ ಅಮ್ಮ ಅರ್ಥಾತ್ ಒಂದು ಹೆಣ್ಣು ನಾಯಿ. ಮನುಷ್ಯರಂತೆಯೇ ನಾಯಿಗಳಲ್ಲೂ ಹಲವು ಜಾತಿ ಪ್ರಭೇದಗಳಿವೆ. ಆದರೆ ನಿಯತ್ತು ಮಾತ್ರ ಎಲ್ಲವಕ್ಕೂ ಇದೆ ಮನುಷ್ಯರಂತಲ್ಲ. ಈ ಹೆಣ್ಣು ನಾಯಿಯ ಜಾತಿಗೂ ಕಥೆಗೂ ಏನೂ ಸಂಭಂಧ ಇಲ್ಲದೇ ಹೋದರೂ, ಅದೊಂದು ತೀರಾ ಮಧ್ಯಮ ವರ್ಗ ಜಾತಿಯ ನಾಯಿ. ವಾಹನಗಳಲ್ಲಿ ಓಡಾಡಿ ಸೋಫಾಗಳಲ್ಲಿ ಮಲಗಿ ಏಳುವ ಮೇಲುಸ್ತರವೂ ಅಲ್ಲ, ಬೀದಿಯಲ್ಲಿ ಅಡ್ಡಾಡಿ ಎಂಜಲು ತಿನ್ನುವ ಕಂತ್ರಿ ಕೀಳುಸ್ತರವೂ ಅಲ್ಲದ ಮರ್ಯಾದಸ್ತ ಮನೆತನದ ಮಧ್ಯಮ ಜೀವನವನ್ನು ಕಳೆಯುತ್ತಿರುವ ನಾಯಿ. ಉದ್ದನೆಯ ಕಪ್ಪಾದ ಮೂತಿ, ಬಾಗಿದ ಕಿವಿ, ಮುಖದಲ್ಲಿಯೇ ಅರಳುವ ಮುಗ್ಧತೆ, ಕಣ್ಣು ಮಿಟುಕಿಸುವ ನಗು, ಅಡಿಯೆತ್ತರದ ಕಾಲುಗಳು ಮತ್ತು ಬಡಕಲು ಶರೀರ, ಹೊಟ್ಟೆಯ ಭಾಗ ಬೆನ್ನಿಗೆ ಅಂಟಿಕೊಂಡಿದೆಯೇ ಎಂಬಂತೆ ಈ ಜೂಲಿಯ ದೇಹಚರ್ಯೆ. ಜೂಲ್ಲಿಗೊಬ್ಬಳು ಒಡತಿ ಇದ್ದಾಳೆ. ಜೂಲಿ ವಾಸಿಸುತ್ತಿರುವ ಮನೆಯ ಯಜಮಾನಿ ಅವಳು. ಜೂಲಿಯನ್ನು ಕೊಂಚ ಅಧಿಕವಾಗಿಯೇ ಪ್ರೀತಿಸುತ್ತಾಳವಳು. ಜೂಲಿಗೂ ತನ್ನ ಒಡತಿಯೆಂದರೆ ಅಚ್ಚುಮೆಚ್ಚು. ಬಾಲ ಬೀಸುತ್ತಾ ಒಡತಿಯ ಸೊಂಟದವರೆಗೆ ಹಾರಿ ಮೈಯಿಡೀ ನಕ್ಕಿ ಶುಭ್ರವಾಗಿಸುತ್ತದೆ. ಜೂಲಿಗೆ, ಅನಾರೋಗ್ಯ ಎಂದೂ ತಪ್ಪಿದ್ದಲ್ಲ. ಹುಟ್ಟಿದಾರಾಭ್ಯದಿಂದ ತಾಯಿಯಾಗುವವರೆಗೂ ತದನಂತರವೂ ರೋಗವನ್ನು ಒಂದು ದಿನವೂ ತಪ್ಪಿಸಿಕೊಳ್ಳಲಿಲ್ಲ. ಒಪ್ಪೊತ್ತು ಉಂಡು ಮನೆಕಾಯುವ ಕೆಲಸ ಜೂಲಿಯದ್ದು.
ಕಥಾ ನಾಯಕ ನಾಯಿಮರಿ ಬ್ಲಾಕಿಯ ಜನನ ಒಂದು ದಿನ ರಾತ್ರಿ ಆಯಿತು. ಒಟ್ಟು ಮೂರು ಮರಿಗಳು ಅಂದು ಜನ್ಮ ತಳೆದಿದ್ದವು. ಬ್ಲಾಕಿ ಹಿರಿಯದೋ ಕಿರಿಯದೋ ಗೊತ್ತಿಲ್ಲ. ಉಳಿದೆರಡು ಮರಿಗಳು ದಿನವೆರಡು ಕಳೆಯುವಷ್ಟರಲ್ಲಿ ಲೋಕ ಬಿಟ್ಟಿದ್ದವು. ಕಾರಣ ಜೂಲಿಯ ಮೊಲೆಯಲ್ಲಿ ಹಾಲೇ ಇಲ್ಲ. ಒಡತಿಯಂತೂ ತೀರಾ ಕಷ್ಟಪಟ್ಟು ಚಮಚದಲ್ಲಿ ಹಾಲು ಕೊಟ್ಟು ಬ್ಲಾಕಿಯನ್ನು ಬದುಕಿಸಿದ್ದಳು. ಬ್ಲಾಕಿ ಮುದ್ದಾದ ಗಂಡು ಮರಿ. ಮೈ ಬಣ್ಣ ಪೂರ್ತಿ ಕಪ್ಪು. ಬಾಲದ ತುದಿ ಮತ್ತು ನೆತ್ತಿಯಲ್ಲಿ ಮಾತ್ರ ಕೊಂಚ ಬಿಳಿ. ಅಂತೂ ಬ್ಲಾಕಿ ಆರಾಮವಾಗಿ ಬೆಳೆಯುತ್ತಿತ್ತು.
ಮೊದಮೊದಲು ಬ್ಲಾಕಿಗೆ ನಡೆಯಲು ಸಾಧ್ಯವಾಗುತ್ತಲೇ ಇರಲಿಲ್ಲ. ತೆವಳುತ್ತಲೇ ಸಾಗುತ್ತಿತ್ತು. ದೊಡ್ಡದಾದಂತೆ ಸರಿಯಾದೀತೆಂದೇ ಒಡತಿ ಭಾವಿಸಿದ್ದಳು. ಆದರೆ, ಐದಾರು ತಿಂಗಳು ತುಂಬಿದರೂ ಬ್ಲಾಕಿಯ ಸೊಂಟದ ಪಾರ್ಶ್ವಕ್ಕೆ ಬಲವೇ ಇರಲಿಲ್ಲ. ಹಿಂಬದಿಯ ಎರಡೂ ಕಾಲುಗಳು ಬಲಹೀನ. ತೀರಾ ಕಷ್ಟದಿಂದ ಎದ್ದು ನಿಂತು ನಡೆದರೂ ಜಾಸ್ತಿ ದೂರ ಹೋಗಲಾಗುತ್ತಿರಲಿಲ್ಲ. ತನ್ನ ಮೈಭಾರವನ್ನು ಹೊರುವ ತ್ರಾಣ ಆ ಕಾಲುಗಳಿಗೆ ಬರಲೇ ಇಲ್ಲ. ಏದುಸಿರು ಬಿಡುತ್ತಾ ಎದ್ದು ನಿಂತೊಡನೆ ದೊಪ್ಪನೆ ನೆಲಕ್ಕೆ ಬೀಳುತ್ತಿತ್ತು ಅಥವಾ ನಡೆದರೂ ಹತ್ತೇ ಹೆಜ್ಜೆ. ಬ್ಲಾಕಿಯ ಕಷ್ಟ ಅಲ್ಲಿಗೇ ಮುಗಿಯಲಿಲ್ಲ. ಬಹಿರ್ದೆಸೆಯ ಅನುಭೂತಿಯೂ ಆ ನಾಯಿಮರಿಗಿರಲಿಲ್ಲ. ಮಲ-ಮೂತ್ರಗಳು ಅದಕ್ಕರಿವಿಲ್ಲದಂತೆಯೇ ಸಾಗುತ್ತಿತ್ತು. ನಡೆದರೂ, ಮಲಗಿದರೂ ನಿಯಂತ್ರಣವಿಲ್ಲದ ವಿಸರ್ಜನೆ ನಿರಂತರ. ನಾಯಿ ಬಾಲ ನೆಟ್ಟಗಾಗದು ಅನ್ನುವ ಗಾದೆ ಮಾತು ಸಂಪೂರ್ಣವಾಗಿಯೇ ಬ್ಲಾಕಿಗೆ ಅನ್ವಯಿಸದು. ಯಾಕೆಂದರೆ ಅದ್ಯಾವತ್ತೂ ಸೊಟ್ಟಗಾಗೇ ಇರಲಿಲ್ಲ. ಸಡಿಲ ಬಿದ್ದ ಬಾಲಕ್ಕೆ ಸ್ಪರ್ಶಾನುಭೂತಿಯೂ ಇರಲಿಲ್ಲ. ಎಷ್ಟೇ ಜೋರಾಗಿ ಬಾಲ ಚಿವುಟಿದರೂ ಬ್ಲಾಕಿ ತುಟಿ ಪಿಟಕ್ಕೆನ್ನುತ್ತಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾದ ಕಷ್ಟವೆಂದರೆ ಕಣ್ಣುಗಳೆರಡೂ ಅಸ್ಪಷ್ಟ. ಎಷ್ಟೋ ಬಾರಿ ಕಷ್ಟಪಟ್ಟು ಎದ್ದು ನಡೆಯ ಹೋಗಿ ಕಾಣದೆ ಗುಂಡಿಗೆ ಬಿದ್ದು ಪುನಃ ಏಟು ಮಾಡಿಕೊಂಡದ್ದಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಬ್ಲಾಕಿ ತನ್ನ ಕರ್ತವ್ಯವನ್ನು ಯಾವತ್ತೂ ಮರೆತಿರಲಿಲ್ಲ. ತನ್ನ ನಿಯತ್ತನ್ನು ಯಾವತ್ತೂ ಮೀರಿರಲಿಲ್ಲ. ಶ್ರವಣಶಕ್ತಿಯಿಂದಲೇ ಗ್ರಹಿಸಿ ಮನೆಗೆ ಯಾರೇ ಬರಲಿ ಬೊಗಳುತಿತ್ತು ಅವರು ಮನೆಯವರೊಂದೆಗೆ ಮಾತಾನಾಡುವವರೆಗೆ. ಕೆಲವೊಮ್ಮೆ ಮನೆಯಾಕೆಗೂ ಬೊಗಳುತಿತ್ತು ಕಣ್ಣು ಸರಿಯಾಗಿ ಕಾಣದ ಕಾರಣ. ಬಳಿ ಬಂದು ಮಾತನಾಡಿದ ಕೂಡಲೇ ತಪ್ಪಿನ ಅರಿವಾಗಿ ಪ್ರೀತಿ ತೋರಿಸುತ್ತಿತ್ತು ಆ ಪುಟ್ಟ ಜೀವ.
ಜೂಲಿಗೂ ತನ್ನ ಕಂದನ ಕಷ್ಟದ ಅರಿವಿತ್ತು. ತನ್ನ ಮಗುವಿನ ಪ್ರತಿ ಹೆಜ್ಜೆಯಲ್ಲೂ ಸ್ಪಂದಿಸುತ್ತಿತ್ತು. ಆಟವಾಡಲು ಕರೆದು ಮರಿಗೆ ಹೊಸ ಹುಮ್ಮಸ್ಸನ್ನು ತುಂಬಿಸಲು ಪ್ರಯತ್ನಿಸುತ್ತಿತ್ತು. ಜೀವನದ ಪಾಠವನ್ನು ತನ್ನದೇ ಶೈಲಿಯಲ್ಲಿ ಬ್ಲಾಕಿಗೆ ಕಲಿಸುತ್ತಿತ್ತು. ಎಂಥಾ ಅದ್ಭುತ.! ಜಗತ್ತಿನಲ್ಲಿ ತಾನು ಮಾತ್ರ ನಾಗರೀಕ ಮೇಧಾವಿ ಅಂತ ಅಂದುಕೊಂಡಿಲ್ಲವೇ ಮನುಷ್ಯ? ಆ ಹೆತ್ತ ಶ್ವಾನದ ಪ್ರೀತಿ ಯಾವ ಮಾನವೀಯತೆಗೆ ಕಮ್ಮಿ? ದೇಹ ಸ್ಪಂದಿಸದೇ ಹೋದರೂ ಕೊಂಚವೂ ಉತ್ಸಾಹ ಕುಗ್ಗಿಲ್ಲ ಆ ನಾಯಿಮರಿಯಲ್ಲಿ! ಭಾಗಶಃ ಅಂಗವೈಕಲ್ಯದಲ್ಲೂ ಆ ತಾಯಿ ಶ್ವಾನಕ್ಕೆ ಒಂದಿನಿತೂ ಮಗುವಲ್ಲಿ ಮಮಕಾರ ಕಮ್ಮಿಯಾಗಿಲ್ಲ. ಪ್ರತಿಯೊಂದರಲ್ಲೂ ಮೀಸಲಾತಿ ಬಯಸುವ ಮನುಷ್ಯ ಬ್ಲಾಕಿಗೆ ಸಾಟಿಯಾದಾನೇ? ತನ್ನ ಕೊರತೆಯನ್ನೇ ಬಂಡವಾಳವಾಗಿಸಿ ಇತರರ ಮೇಲೆ ಸವಾರಿ ಮಾಡಲು ಹೊರಟಿರುವ ಮಾನವ ನಾಗರೀಕನೇ? ಮನುಷ್ಯನಿಗೆ ಸಡ್ಡು ಹೊಡೆಯುವಂತಿದೆ ಆ ಬ್ಲಾಕಿಯ ಶೈಲಿ. ಸೋಲು ಅದಕ್ಕೆ ಗಣ್ಯವೇ ಅಲ್ಲ. ಗೆಲುವು ಮಾತ್ರ ಅದರ ಗುರಿ. ಅದರ ಪ್ರಯತ್ನಗಳು ನಿರಂತರ. ನಿರೀಕ್ಷೆಗಳು ಅಪಾರ. ನಿನ್ನೆ ಇಂದು ಸಮಯದ ಗೊಡವೆಯೇ ಇಲ್ಲದೇ ಅದರ ಹೋರಾಟ. ಕಣ್ಣು ಕಾಣದಿದ್ದರೂ ಓಡುವ ಆಸೆ ಕುಗ್ಗಿಲ್ಲ. ಕಾಲು ಬಲರಹಿತವಾದರೂ ಎದ್ದು ನಿಲ್ಲುವ ಆಸೆ ಬಿಟ್ಟಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಕರ್ತವ್ಯದ ಪ್ರಜ್ನೆಯನ್ನು ಬಿಟ್ಟು ಬದುಕುವ ಯೋಚನೆಯೇ ಇಲ್ಲ. ಕಾಲಿಗೆ ಮುಳ್ಳು ಗೀರಿದರೆ ಮೂರುದಿನ ಕಚೇರಿಗೆ ಗೈರಾಗುವ ಮನುಷ್ಯ ಮುಖವಾಡದ ನಾವೆಲ್ಲಿ? ಬ್ಲಾಕಿ ಎಲ್ಲಿ?
ಎಂದಿನಂತೆ ಅಂದು ಸಂಜೆ ಕೂಡ ಒಡತಿ ಜೂಲಿ ಹಾಗೂ ಬ್ಲಾಕಿಯನ್ನು ಸಂಕೋಲೆ ಕಳಚಿ ವಾಯುವಿಹಾರಕ್ಕಾಗಿ ಬಿಟ್ಟಿದ್ದಳು. ಬ್ಲಾಕಿಗೆ ಹೊರ ಹೋಗಲು ಸಾಧ್ಯವಿಲ್ಲ, ಜೂಲಿ ಹೋದರೂ ಒಂದರ್ಧ ಘಂಟೆ ವಿಹಾರದ ಬಳಿಕ ತಾನಾಗಿಯೇ ಬಂದು ಮಲಗುವುದು ವಾಡಿಕೆ. ಮನೆಯ ಗೇಟು ದಾಟಿ ಮಾರ್ಗದಲ್ಲಿ ಅದರ ಸಂಚಾರ. ಬೀದಿ ನಾಯಿಗಳೊಂದಿಗೆ ಜಾಸ್ತಿ ಬೆರೆಯದೇ ವಾಪಸ್ಸಾಗುತ್ತಿತ್ತು. ಅವತ್ತೂ ಕೂಡ ನಾಯಿಗಳನ್ನು ಆಟವಾಡಲು ಬಿಟ್ಟು ತಾನು ಮನೆಗೆಲಸಗಳಿಗೆ ತೆರಳಿದ್ದಳು. ಒಂದಿಪ್ಪತ್ತು ನಿಮಿಷ ಕಳೆದಿರಬಹುದು. ಕುಂಯ್ಯ್ ಎಂಬ ಶಬ್ದದ ಬೆನ್ನಲ್ಲೇ ಜೂಲಿಯ ಬೊಗಳುವಿಕೆಯೂ ಕೇಳತೊಡಗಿತು. ಈಗ ಮತ್ತಷ್ಟು ಜೋರಾಗತೊಡಗಿತು. ಒಡತಿ ಅಂಗಳಕ್ಕೆ ಬಂದು ನೋಡಿದರೆ ಅಲ್ಲಿ ನಾಯಿಗಳಿಲ್ಲ. ಗೇಟು ದಾಟಿ ಮಾರ್ಗಕ್ಕೆ ಬಂದಳು. ನಡು ಮಾರ್ಗದಲ್ಲಿ ಬ್ಲಾಕಿ ಅಂಗಾತ ಬಿದ್ದಿತ್ತು. ಜೂಲಿ ಮರಿಯನ್ನು ಮೂಸುತ್ತಾ ಒಂದೇ ಸಮನೆ ಬೊಗಳುತಿತ್ತು. ಒಡತಿ ಪಕ್ಕಕ್ಕೆ ಓಡಿದಳು. ಅಂಗಾತ ಬಿದ್ದಿದ್ದ ಬ್ಲಾಕಿಯ ತಲೆಯಿಂದ ರಕ್ತ ಸೋರುತ್ತಿತ್ತು. ಕೊನೆಯ ಉಸಿರಿಗಾಗಿ ಚಡಪಡಿಸುತ್ತಿತ್ತು. ಕ್ಷೀಣವಾದ ಆರ್ತನಾದ ಗಂಟಲಿನಲ್ಲೆಲ್ಲಿಂದಲೋ ಬಂದಂತೆ ಅವಳಿಗೆ ಭಾಸವಾಯಿತು. ಓಡಿ ಹೋಗಿ ತಂಬಿಗೆಯಲ್ಲಿ ನೀರು ತಂದಳು. ಚಡಪಡಿಸುತ್ತಿದ್ದ ನಾಯಿಮರಿಯ ಬಾಯಿಗೆ ಹನಿ ನೀರು ಬಿಟ್ಟಳು. ಅದಕ್ಕಾಗಿಯೇ ಕಾದಂತೆ, ಎರಡು ಕ್ಷಣದಲ್ಲಿಯೇ ನಿಶ್ಚಲವಾಯಿತು ಆ ಪುಟ್ಟ ದೇಹ. ಜೂಲಿಯ ಆಕ್ರಂದನ ಕಿವಿ ಕಿವುಡಾಗಿಸುತ್ತಿತ್ತು. ಸಾಂತ್ವನ ಯಾರು ಹೇಳಿಯಾರು? ಹೇಗೆ ಹೇಳಿಯಾರು? ರಕ್ತ ಕಾರಿ ಸತ್ತು ಮಲಗಿದ ಮರಿಯನ್ನು ತಾಯಿ ಶ್ವಾನ ನೋಡೀತೇ? ಆ ದುಃಖ ಸಹಿಸೀತೇ? ಆಡುತ್ತಾ ಅಂಗಳಕ್ಕೆ ಇಳಿದಿದ್ದ ಬ್ಲಾಕಿಯನ್ನು ಜೂಲಿ ತಾನಾಗಿಯೇ ಗೇಟು ದಾಟಿಸಿ ಮಾರ್ಗಕ್ಕೆ ಕರೆ ತಂದಿತ್ತು. ತನ್ನ ಮರಿಗೆ ಹೊರಜಗತ್ತನ್ನು ತೋರಿಸುವಾಸೆ ಆ ತಾಯಿಗೆ. ಬ್ಲಾಕಿ ಮಾರ್ಗದಲ್ಲಿ ನೆಲ ಮೂಸುತ್ತಾ ಸಾಗುವುದನ್ನು ಕಂಡ ಜೂಲಿಯ ಮನ ಆನಂದದಿಂದ ಕುಣಿದು ಕುಪ್ಪಳಿಸಿತ್ತು ನಿಮಿಷಗಳ ಹಿಂದೆ. ಆ ಸಂತಸ ಇಮ್ಮಡಿಯಾಗುತಿತ್ತೇನೋ ಯಮರೂಪಿಯಾಗಿ ಆ ಲಾರಿ ಬಾರದೇ ಹೋಗಿದ್ದರೆ. ಓಡು ಮಗುವೇ ಅಂತ ಚೀರಿತ್ತು ಜೂಲಿ. ಆದರೆ ಓಡುವುದು ಎಲ್ಲಿಗೆ? ಹೇಗೆ ಅಂತಾನೇ ಅರ್ಥವಾಗದೇ ಬ್ಲಾಕಿ ಸಾವ ಬಾಗಿಲನ್ನು ಪ್ರವೇಶಿಸಿತ್ತು. ತನ್ನ ಹೋರಾಟದ ಬದುಕನ್ನು ಅರ್ಧದಲ್ಲೇ ಮೊಟುಕುಗೊಳಿಸಿತ್ತು. ಎಲ್ಲಕ್ಕೂ ಮೂಗು ತೂರಿಸುವ ಮನುಷ್ಯ ಲಾರಿ ಚಾಲಕನಾಗಿ ಬಂದು ಆ ನಿರೀಕ್ಷೆಯ ಗೋಪುರವನ್ನೇ ಮೆಟ್ಟಿ ಧೂಳಾಗಿಸಿ ಏನೂ ನಡೆದೇ ಇಲ್ಲವೆಂಬಂತೆ ಸಾಗಿದ್ದ. ಇನ್ನೇನು ಜಗತ್ತಿಗೆ ಪರಿಚಯವಾಗುವ ಮುನ್ನವೇ ಬ್ಲಾಕಿಯ ಆಯಸ್ಸು ಮುಗಿದಿತ್ತು. ಪ್ರೀತಿಸಲು ಜೂಲಿ ತನ್ನ ಮಗುವನ್ನೂ ಕಳೆದಿತ್ತು.
"ಪಾಕಿಸ್ತಾನ್ ಮುರ್ದಾಬಾದ್,, ಪಾಕಿಸ್ತಾನ್ ಮುರ್ದಾಬಾದ್.." ಒಂದೇ ಸಮನೆ ಅರಚುತ್ತಿದ್ದ ಕತ್ತೆಯಂತೆ. ಯಾಕೆ ಅಂತ ಬೇರೆ ಹೇಳಬೇಕೆ? ಈ ದೇಶದಲ್ಲಿ ರಾಷ್ಟ್ರಪ್ರೇಮ ತೋರ್ಪಡಿಸಲು ಇರುವ ಮಾರ್ಗ ಇದನ್ನು ಬಿಟ್ಟರೆ ಬೇರ್ಯಾವುದಿದೆ? ವೈರಿ ದೇಶವನ್ನು ಕುಂತೂ ನಿಂತೂ ಅಟ್ಟಾಡಿಸಿ ಅವಮಾನಿಸಿದಾಗಲೇ ದೇಶಭಕ್ತನಾಗಲು ಸಾಧ್ಯ. ಇಲ್ಲದವನು ಬರೇ ಹೇಡಿ. ದೇಶ ದ್ರೋಹಿ. ಅಂತೆಯೇ ಇವನು. ಮುಗ್ಧ ಜನರ ಅಥವಾ ಹಾಗಂತ ಇವನಂದುಕೊಂಡಿರುವವರ ನಡುವೆ ನಿಂತು ತನ್ನ ಜನ್ಮಭೂಮಿಯನ್ನು ಹೊಗಳುವ ಬದಲು ಯಾರನ್ನೋ ತೆಗಳುತ್ತಿದ್ದಾನೆ, ತನ್ನ ಸಮಯಕ್ಕೆ ಬೆಲೆಯೇ ಇಲ್ಲವೆಂಬಂತೆ. ಬೃಹತ್ ವೇದಿಕೆ ಅವನ ಭಾಷಣಕ್ಕಾಗಿ ಸಿದ್ದವಾಗಿತ್ತು. ಜನ ಸಾಗರೋಪಾದಿಯಲ್ಲಿ ಅವನ ರಗಳೆಯೋ ಬೊಗಳೆಯೋ ಏನೋ ಒಂದನ್ನು ಕಿವಿ ತುಂಬಿಸಲು ಕಾತರರಾಗಿದ್ದರು. ಪ್ರತೀ ಬಾರಿ ಪಾಕನ್ನು, ಪಾಕಿಸ್ತಾನಿಯರನ್ನು ಹೀಗಳೆದಾಗ ಸಭಿಕರಿಂದ ಕವಿಗಡಚಿಕ್ಕುವ ಚಪ್ಪಾಳೆ. ಹೋ ಎಂಬ ಕೂಗು. ದೇಶಪ್ರೇಮ ಬಲಿತು ರೋಮ ನಿಮಿರಿ ಗನ್ನೋ ಖಡ್ಗವೋ ಈಗ ಕೈಗೆ ಕೊಟ್ಟಿದ್ದರೆ ಅವರೆಲ್ಲರೂ ಸೇರಿ ಪಾಕಿ ಪಾತಕಿಗಳನ್ನು ಇತಿಹಾಸವಾಗಿಸುತ್ತಿದ್ದರೋ ಏನೋ..! ವೇದಿಕೆಯ ಮೇಲೆ ಕುಳಿತಿದ್ದ ಗಣ್ಯರೆಲ್ಲಾ ಇವನ ಮಾತಿಗೆ ಗೋಣಾಡಿಸುತ್ತಿದರು. ಆಹಾ.. ಎಂಥಾ ಭಾಷಣ..!! ಕಿವಿ ಇಂದು ತಂಪಾದವು. ಮೈಮನಗಳು ಕೆಂಪಾದವು. ಇವನಲ್ಲವೇ ದೇಶೋದ್ಧಾರಕ? ಇವನಲ್ಲವೇ ಭಾರತ ಮಾತೆಯ ಅಸಲಿ ಸುಪುತ್ರ..? ಉಳಿದ ನಕಲಿ ಪುತ್ರರಿಗೆ ನಾಚಿಕೆಯಾಗಬೇಕು. ಒಂದು ದಿನವಾದರೂ ಈ ಕಲಬೆರಕೆ ಮಕ್ಕಳು ಪಾಕಿಸ್ತಾನಕ್ಕೆ ಬೈದದ್ದುಂಟೇ? ಬೈಯ್ಯದ ಇವರೆದ್ದೆಂಥಾ ರಾಷ್ಟ್ರಪ್ರೇಮ? ಎಂದೆಲ್ಲಾ ಅಲ್ಲಿನವರು ಮನದಲ್ಲೇ ಲೆಕ್ಕಹಾಕುತ್ತಿದರು. ಜನರ ಸಿಳ್ಳೆ ಚಪ್ಪಾಳೆಗಳಿಂದ ಉಲ್ಲಸಿತನಾದ ಆತ ಮತ್ತಷ್ಟು ಜೋರಾಗಿ ಊಳಿಡತೊಡಗಿದ. ಪಾಕಿಸ್ಥ್ಹಾನದ ವಂಶಸ್ಥರು ಈ ಭರತ ಪುಣ್ಯಭೂಮಿಯಲ್ಲಿದ್ದಾರೆಂದೂ ಅವರನ್ನೆಲ್ಲಾ ಒದ್ದೋಡಿಸುತ್ತೇನೆಂದೂ ಶಪಥವನ್ನೇ ಗೈದ. ಇಡೀ ದೇಶವೇ ತನ್ನೊಬ್ಬನ ಆಸ್ತಿಯೆನ್ನುವಂತೆ.
ಬಡ ದೇಶದ ಉದ್ಧಾರಕ್ಕಾಗಿ ಕೋಟಿ ಖರ್ಚು ಮಾಡಿದ ಭಾಷಣ. ಬಡವಲ್ಲವೇ ಭರತ ಖಂಡ? ಯಾರು ಬಡವರಲ್ಲದವರು? ಎಲ್ಲರೂ ಬಡವರೇ, ಎಲ್ಲರೂ ತಮ್ಮನ್ನು ತಾವು ಬಡ ಮಾಸ್ತರನೆಂದೋ, ಬಡ ಕಾರ್ಮಿಕನೆಂದೋ, ಬಡ ಸರಕಾರಿ ನೌಕರನೆಂದೋ, ಬಡ ಉದ್ಯಮಿ, ಬಡ ರಾಜಕಾರಣಿ, ಬಡ ಮಂತ್ರಿ ಈಗಂತೂ ಬಡ ಪ್ರಧಾನ ಮಂತ್ರಿಯೆಂದೇ ಪರಿಚಯಿಸುತ್ತಾರೆ. ಇಂಥಾ ಬಡವರ ಮಧ್ಯೆ ಇವನ ಕೋಟಿಯ ಭಾಷಣ, ದೇಶದ ಉದ್ಧಾರಕ್ಕಾಗಿ. ಈ ಭಾಷಣ ಇರುವುದೇ ಬಡ ಜನರ ಬಡ ನಾಡಿಗಾಗಿ. ಅವರ ಮನರಂಜನೆಗಾಗಿ ಅಲ್ಲ ಮನಭಂಜನೆಗಾಗಿ. ಬಡವರ ಪರವಾಗಿ ಮಾತನಾಡುವವರು ಬೇಡವೇ? ಅವರನ್ನು ಸರಿದಿಕ್ಕಿಗೆ ತರುವ ಮಾರ್ಗ ದರ್ಶಕರು ಬೇಡವೇ? ಈ ಎಲ್ಲದಕ್ಕಾಗಿ ಇವನ ಭಾಷಣ. ಮಾತಾಡಬೇಕು. ಮಾಡಲಾರದವನು ಮಾತನಾಡುತ್ತಾನೆ. ಮಾತಿಗಿಲ್ಲವೇ ಬೆಲೆ? ಅದೂ ಕೋಟಿಯದ್ದು. ಮನೆಯನ್ನು ಹೊಗಳದಿದ್ದರೂ ಪರವಾಗಿಲ್ಲ, ನೆರೆಯವನನ್ನು ಎಂದೂ ಬಿಡಲಾರೆನೇ. ನೆರೆಯವರೊಂದಿಗೆ ಸಂಭಂದ ಹೊಂದಿರುವವನನ್ನೂ ಜರಿಯಬೇಕು. ಹೊಂದಬಹುದಾದವನನ್ನೂ ತುರಿಯಬೇಕು. ನೆರೆಯವನ ಮುಖ ನೋಡದವನನ್ನೂ ಬಿಡಲಾರೆನೇ, ಊಹೆಗಳಿಗೂ ನಿಜದ ಲೇಪ ಹಚ್ಚಿ ಕರಿದು ಮಸಿಯಾಗಿಸಬೇಕು ತನ್ನ ಕೋಟಿ ಖರ್ಚು ಮಾಡಿದ ಭಾಷಣದಲ್ಲಿ. ಭಾಷಣ ಅಂದ್ರೇನೇ ಹಾಗೆ. ಸಾವಿರ ಜನರನ್ನು ಏಕ ಕಾಲದಲ್ಲಿ ಮೂರ್ಖರನ್ನಾಗಿಸುವುದು. ತಾನು ಹೇಳುತ್ತಿರುವುದು ಸತ್ಯ. ತಾನು ಹೂಳುವುದು ಅಲ್ಲ ಹೇಳುವುದು ಸತ್ಯವನ್ನು ಮಾತ್ರ. ತಾನು ಹೇಲುವುದು ಅಲ್ಲ ಹೇಳುವುದು ಮಾತ್ರ ಸತ್ಯ. ತಾನು ಮಾತ್ರ ಹಳಿಯುವುದು ಅಲ್ಲ ಹೇಳುವುದು ಸತ್ಯ. ಎಂಬಿತ್ಯಾದಿಗಳನ್ನು ಶೋತೃಗಳ ಮನಕಲಕುವಂತೆ ತಲುಪಿಸುವುದು. ಆ ಕಲೆ ಇವನಿಗಿಂತ ಚೆನ್ನಾಗಿ ಬಲ್ಲವರಾರು? ಸತ್ಯ-ನ್ಯಾಯ-ಧರ್ಮಗಳು ಇವನ ಮಾತಿನ ಭರಕ್ಕೆ ಸಿಕ್ಕು ವಿಲವಿಲನೇ ಒದ್ದಾಡಬೇಕು. ಸಿಗದಿದ್ದರೆ, ತಾನೇ ಎಳೆತಂದು ಅತ್ಯಂತ ನೈತಿಕವಾಗಿ ಮಾತಿನಲ್ಲೇ ಅತ್ಯಾಚಾರ ಎಸಗುವುದು ಇವನಿಗೆ ಗೊತ್ತು.
ತಿಂಗಳಿಗೆ ಕನಿಷ್ಠ ಹತ್ತಾದರೂ ಭಾಷಣ ಮಾಡಿದರೇನೆ ಇವನಿಗೆ ಸಮಾಧಾನ. ಪ್ರತೀ ಭಾಷಣಕ್ಕೂ ಲಕ್ಷ ತಲೆ ಸೇರಬೇಕು. ಖಾಲಿ ತಲೆಯಾದರೂ ಪರವಾಗಿಲ್ಲ. ತುಂಬಿದ ತಲೆ ಇವನ ಭಾಷಣ ಕೇಳುವುದುಂಟೇ? ಹಾಗಲ್ಲ, ಭಾಷಣಕ್ಕೆ ನೂಕು ನುಗ್ಗಲಾಗಬೇಕು. ಯಾರೋ ಒಂದಿಬ್ಬರು ಕಾಲ್ತುಳಿತಕ್ಕೋ ಕೈತುಳಿತಕ್ಕೋ ಸಿಕ್ಕು ಆಸ್ಪತ್ರೆ ಸೇರಬೇಕು. ಅಂಗಡಿ ಮುಗ್ಗಟ್ಟುಗಳೆಲ್ಲಾ ಮುಚ್ಚಿ ಇವನದೇ ಭಜನೆ ಮಾಡಬೇಕು. ಇಡೀ ನಾಡಿಗೆ ನಾಡೇ ಸ್ತಬ್ದವಾಗಬೇಕು ಇವನ ಭಾಷಣ ಕೇಳಲೆಂದು. ರಸ್ತೆಗಳಲ್ಲೂ ಜನ ತುಂಬಿ ವಾಹನಗಳು ಗಂಟೆಗಟ್ಟಲೆ ಕಾಯಬೇಕು. ಬಸುರಿ ಎನಾದರೂ ವಾಹನದಲ್ಲಿದ್ದರೆ ಅಲ್ಲೇ ಹೆತ್ತು ತನ್ನ ಹೆಸರೇ ಇಡುವಂತಾಗಬೇಕು, ಹೆಣ್ಣಾದರೂ ಗಂಡಾದರೂ. ಅಲ್ಲವೇ ಮತ್ತೆ? ಮುಂದಿನ ಭಾಷಣದಲ್ಲಿ ಇದನ್ನೂ ಸೇರಿಸಿ ತನ್ನ ಕರಾಮತ್ತೆನ್ನಬೇಡವೇ? ಕಿಕ್ಕಿರಿದ ಜನಸಂದಣಿಯ ನಡುವೆ ತಾನು ಬೊಬ್ಬಿರಿದು ಭಾಷಣ ಮಾಡಬೇಕು. ಒಬ್ಬ ಭಾಷಣಕಾರ ಇದಕ್ಕಿಂತ ಹೆಚ್ಚು ಏನು ಆಗ್ರಹಿಸಿಯಾನು? ರಸ್ತೆಯ ಇಕ್ಕೆಲಗಳಲ್ಲಿ ಅರಾಳೆತ್ತರದ ಬ್ಯಾನೆರ್ಗಳು ರಾರಾಜಿಸಬೇಕು ಧ್ವಜ-ತೋರಣಗಳೊಂದಿಗೆ. ಬರೇ ಸ್ವಾಗತ.. ಶುಭಕೋರುವ.. ಅಂತಿದ್ದರೆ ಸಾಲದು, ಬಡವರ ಬಂಧು, ಅಶಾಕಿರಣ-ರಮಣ, ಸಾಮ್ರಾಟ, ಚಕ್ರವರ್ತಿ, ಕಾಡಿನ ರಾಜ-ನಾಡಿನ ಬೀಜ, ದೇವಾಧಿದೇವ, ಪರಮಪೂಜ್ಯ ಅಂತೆಲ್ಲಾ ಬಿರುದು ಬಾವಲಿಗಳು ಅಚ್ಚಾಗಬೇಕು. ಅವಕ್ಕೆ ಪಂಚಾಮೃತ ಅಭಿಷೇಕ ನಡೆಯಬೇಕು, ಸಾಧ್ಯವಿದ್ದರೆ ಪ್ರತಿಷ್ಠಾಪಿಸಿ ಮೂರು ಹೊತ್ತು ಉಪಾಸನೆ ನಡೆದರೂ ಚಿಂತಿಲ್ಲ. ಉದ್ವಾಯನವಿಲ್ಲದೇ ಅವುಗಳು ಅಲ್ಲೇ ಕೊಳೆತು ನಾರಬೇಕು ಜನಕ್ಕೆ ಮುನಿಸಿಪಾಲಿಟಿಯವರನ್ನು ಬೈಯ್ಯಲು ಕಾರಣವಾಗಲೆಂದು.  
ಅಯ್ಯೋ ದೇವರೇ ಎಷ್ಟೊಂದು ಕಷ್ಟ ಪಡುತ್ತಿದ್ದಾನೀತ? ಗಡಿಯಲ್ಲಿ ಕಾಯುವ ಯೋಧನಿಗಿಂತ ಹೆಚ್ಚು ರೋಷಾವೇಶಗಳು ಜವಾಬ್ದಾರಿಗಳು ಇವನ ಮೇಲಿಲ್ಲವೇ? ಈ ರಾಷ್ಟ್ರದ ಸಂಘಟನೆಗಾಗಿ ತಾನು ಭಾಷಣ ಮಾಡುತ್ತಿದ್ದೇನೆ. ತನ್ನ ಸಮಾವೇಶ ಸಂಗಮಗಳು ದೇಶದ ಸನಾತನವೋ ಪುರಾತನವೋ ಆದ ಸಮುದಾಯದ ಶ್ರೇಯಸ್ಸಿಗಾಗಿ. ತನ್ನ ಭಾಷಣವೇನಾದರೂ ನಿಂತು ಹೋದರೆ ಮೊಘಲರಿಂದ ಹಿಡಿದು ಬ್ರಿಟೀಷರವರೆಗೆ ಈ ದೇಶವನ್ನು ಪುನಃ ಆಕ್ರಮಿಸಿದರೆ ಅನ್ನೋ ಆತಂಕ ಇವನದು. ಅದಕ್ಕೇ ಈ ಮಾತಿನ ಭರ. ನಾಡಿನ ಪ್ರಜ್ನಾವಂತ ನಾಗರೀಕರನ್ನು ಎಚ್ಚರಿಸಲು, ಎಬ್ಬಿಸಲು. ಈಗಾಗಲೇ ಎದ್ದಿರುವವರನ್ನು? ಏಳಲೇ ಬಾರದೆಂದು ಹಠ ಹಿಡಿದವರನ್ನು? ಮಾತು ನಿಲ್ಲುತ್ತಲೇ ಇಲ್ಲ. ಮಾತಿನಿಂದಾದ ನಷ್ಟ ಮುತ್ತು ಕೊಟ್ಟರೂ ತುಂಬದು. ವೈರಿಗಳನ್ನು, ವೈರಿಗಳೆಂದು ತಾನಂದುಕೊಂಡಿರುವವರನ್ನು ತೆಗಳಿ ಮನಕ್ಕೆ ಕಿಚ್ಚು ಹಚ್ಚಿ ಉತ್ತೇಜಿಸಿ ಉದ್ರೇಕಿಸಿ ಒಗ್ಗಟ್ಟಿನ ಹೆಸರಲ್ಲಿ ಸಮರವನ್ನೇ ಬಯಸುತ್ತಿದ್ದಾನೆ ಮೂಢ. ಯಾರೋ ಚೀಟಿ ಕೊಟ್ಟರು ಇನ್ನೂ ಭಾಷಣಕ್ಕೆ ಸರತಿಯಲ್ಲಿದ್ದಾರೆಂದು. ಮಾತು ಮುಗಿಸಿದ.
"ದೇಶವಾಸಿಗಳೇ, ಕ್ರಾಂತಿ ವೀರರೇ, ಶೂರಪರಾಕ್ರಮಿಗಳೇ, ಏಳಿ ಎದ್ದೇಳಿ, ನಮ್ಮ ಬಲಪ್ರದರ್ಶನ ಮಾಡೋಣ. ಎಲ್ಲಾರೂ ಒಂದಾಗಿ ಭಾರತ ಮಾತೆಯ ಪುಣ್ಯಭೂಮಿಯನ್ನು ಹಸನಾಗಿಸೋಣ"
ಕೇಳಿದ ಭಾರತ ಮಾತೆಯೂ ವಿಷಾದದಿಂದ ನಕ್ಕಳು. ಈಗಾಗಲೇ ಒಂದಾಗಿದ್ದೇವಪ್ಪಾ, ಇನ್ನೂ ಒಂದಾಗಿ ಬಲ ತೋರಿಸೋದು ಯಾರಿಗೆ?ಯಾಕೆ? ಅಂತ ಯಾರೊಬ್ಬನೂ ಪ್ರಶ್ನಿಸಲಿಲ್ಲ..!!  

Sunday, August 4, 2013

ಮುಂಜಾವು

ಶಿರ್ವ ಎಂಬುದು ಉಡುಪಿ ಸಮೀಪದ ಊರು. ಮಂಚಕಲ್ ಎಂದೂ ಈ ಊರಿಗೆ ಹೆಸರಿದೆಯಂತೆ. ಮಂಗಳೂರಿಂದ ಹೆಚ್ಚೂ ಕಡಿಮೆ ಒಂದು ಗಂಟೆ ಕಾಪುವಿಗೆ ಪ್ರಯಾಣ ಮಾಡಿ ಅಲ್ಲಿಂದ ಮತ್ತೊಂದು ಬಸ್ಸು ಹಿಡಿದು ಇಲ್ಲಿಗೆ ಬರಬೇಕು. ಮೊದ ಮೊದಲು ಈ ಊರಿಗೆ ಎರಡು ಹೆಸರು ಇರುವ ವಿಷಯ ತಿಳಿದಿರಲಿಲ್ಲ. ಶಿರ್ವ ಎಂಬುದು ಮಾತ್ರ ಎಂದು ನನ್ನ ಅರಿವಾಗಿತ್ತು. ಸಾರಿಗೆ ವಾಹನದಲ್ಲೆಲ್ಲಾ ಮಂಚಕಲ್ ಎಂದೇ ಬರೆದಿತ್ತಾದ್ದರಿಂದ ನಿಲ್ದಾಣದಲ್ಲಿ ಕಾದು, ಕಾದು ಬೆಪ್ಪನಾಗಿದ್ದೆ. ನಾನು ಈ ಊರಿಗೆ ಬಂದು ತಿಂಗಳೆರಡಾಯಿತು. ಶಿರ್ವ ಒಂದು ಸಣ್ಣ ಪೇಟೆ. ನಿತ್ಯೋಪಯೋಗಿ ಎಲ್ಲಾ ಸಾಮಾಗ್ರಿಗಳು, ಕೆಲವೊಮ್ಮೆ ಇನ್ನೂ ಅಧಿಕ ದೊರೆಯುವ, ಅಂದಾಜು ಜನಸಂದಣಿ ಇರುವ ಪೇಟೆ ಎಂದರೂ ತಪ್ಪಲ್ಲ. ಆದರೂ ಇಲ್ಲಿ ಎಂಟು ಬಾರ್(ಮಧ್ಯದಂಗಡಿ) ಇರುವ ವಿಷಯ ತಡವಾಗಿಯಾದರೂ ಅರಿವಿಗೆ ಬಂತು. ಬಹುಶಃ ಇಲ್ಲಿನ ಜನ ಮಧ್ಯ ಪ್ರಿಯರೋ ಏನೋ?(ಸರಿಯಾಗಿ ಇನ್ನೂ ಅನುಭವಕ್ಕೆ ಬಂದಿಲ್ಲ). ಪೇಟೆಯಿಂದ ಬಹುಸ್ವಲ್ಪ ದೂರದಲ್ಲಿರುವ ಪುರಾತನ ಬಾಡಿಗೆ ಮನೆಯೊಂದರಲ್ಲಿ ಎಂ.ಎಸ್.ಡಬ್ಲ್ಯು. ಉಪನ್ಯಾಸಕರಾದ ವಿಘ್ನೇಶ್ ಹೊಳ್ಳರೊಂದಿಗೆ ನನ್ನ ವಾಸ. ಮನೆ ಅಷ್ಟೊಂದು ಕೆಟ್ಟದಾಗಿಲ್ಲ ಬಿಡಿ. ಮನುಷ್ಯರ ಕಾಟವಿಲ್ಲದಿದ್ದರಿಂದಲೋ ಏನೋ ಇಲ್ಲಿ ಸೊಳ್ಳೆಗಳ ಕಾಟ ವಿಪರೀತ. ಪ್ರತೀನಿತ್ಯ ಒಂದರ್ಧ ಲೀಟರು ನನ್ನಿಂದ ನೆತ್ತರು ಬಲವಂತವಾಗಿ ಹೀರಿ ಪಡೆದು ಆರಾಮವಾಗಿವೆ ಅವು. ಬಾಡಿಗೆಯೂ ಕಡಿಮೆಯಾಗಿದ್ದರಿಂದ, ರಕ್ತದಾನ ಕಷ್ಟವಲ್ಲ. ಹಾಗೋ ಹೀಗೋ ಸೊಳ್ಳೆಗಳೊಂದಿಗೆ ಜೀವನ. ನನ್ನ ಸಹೋದ್ಯೋಗಿ ಮಿತ್ರರಾದ ಕನ್ನಡ ಮೇಷ್ಟ್ರು ದೊರಕಿಸಿ ಕೊಟ್ಟ ಮನೆ ಇದು.
ಮೊದಲೇ ಹೇಳಿದಂತೆ ಮನೆ ಅತ್ಯಂತ ಹಳೆಯದಾದ್ದರಿಂದ ಗೋಡೆಗಳೆಲ್ಲ ಮಣ್ಣಿನದು. ಸುತ್ತಲೂ ಬೆಲೆಬಾಳುವ ಮರಗಳ ಮುಚ್ಚಿಗೆ, ದಾರಂದ, ಕಿಟಕಿಗಳು. ಬೇಸಗೆ ಕಳೆಯಲು ಕರಾವಳಿಯಲ್ಲಿ ಹೇಳಿ ಮಾಡಿಸಿದಂತಿದೆ. ದಿನದ ಇಪ್ಪತ್ನಾಕು ಗಂಟೆಯೂ ವಿದ್ಯುದ್ದೀಪ ಉರಿಸುವ ಅನಿವಾರ್ಯತೆಯೂ ಇಲ್ಲದಿಲ್ಲ. ಆದರೂ ತಂಪಿನ ಕಗ್ಗತ್ತಲಲ್ಲಿ ಮಲಗಿ ನಿದ್ರಿಸಿದರೆ ಬೆಳಗಾದ ಗೊಡವೆಯೊಂದೂ ಇಲ್ಲದಾಗುತ್ತದೆ. ಮಣ್ಣಿನ ಗೆದ್ದಲು, ಇಲಿಗಳೂ ಇಲ್ಲಿನ ಅತಿಥಿಗಳು ಎಂದು ಚೂರು ತಡವಾಗಿ(ಹೇಗೆಂದು ಮುಂದೆ ಹೇಳುತ್ತೇನೆ) ನನ್ನರಿವಿಗೆ ಬಂತು. ಆದರೂ ಬಾವಿಯ ತಣ್ಣನೆಯ ಶುಭ್ರ ನೀರು ಕುಡಿದ ಮೇಲೆ ಇವ್ಯಾವು ದೊಡ್ಡ ಸಮಸ್ಯೆಯಾಗೆ ಗೋಚರಿಸಲಿಲ್ಲ.
ಹೀಗಿದ್ದ ಅದೊಂದು ದಿನ ಮುಂಜಾವು ೨ ಗಂಟೆಯಾಗಿದ್ದಿರಬಹುದು. ಮಿತ್ರ ಉಪನ್ಯಾಸಕರು ರಜೆಯ ಮೇಲಿದ್ದರು. ನಾನೊಬ್ಬನೆ ಕುಂಭಕರ್ಣ ನಿದ್ದೆಯಲ್ಲಿದ್ದೆ. ಧಿಡೀರನೆ ಅಡುಗೆ ಮನೆಯಲ್ಲಿ ಏನೋ ಸದ್ದು. ಎಚ್ಚರವಾದೆ. ಸದ್ದು ನಿಂತಿತು. ಪರಿಚಯವಿಲ್ಲದ ಊರು. ಮನೆ ಹಳೆಯದಾದರೂ ನನ್ನದು ಹೊಸ ವಾಸ್ತವ್ಯ. ಹಿಂಬಾಗಿಲು ಭದ್ರವಾಗಿ ಹಾಕಿದ್ದೆನೆಂದು ನೆನಪು. ಕಾರಣವೇನಿರಬಹುದು? ಭಾರಿ ಧೈರ್ಯಶಾಲಿಯಲ್ಲದಿದ್ದರೂ ಹೇಡಿಗಿಂತ ಚೂರು ಜಾಸ್ತಿ ಎನ್ನಲಡ್ಡಿಯಿಲ್ಲ. ಕಳ್ಳ-ಕಾಕರೇ ಅಥವಾ ಭೂತ-ಪ್ರೇತ ಚೇಷ್ಟೆಯೇ ಎಂಬ ಪ್ರಶ್ನೆ ಮನದಲ್ಲಿ ಹಾದು ಹೊಯಿತು. ಸಾಯಲಿ. ಮತ್ತೆ ಮುಸುಕು ಎಳೆದೆ. ಒಂದೆರಡು ನಿಮಿಶ ಮತ್ತದೇ ಸದ್ದು. ಕಣ್ಣು ಬಿಟ್ಟರೆ ಮೌನ. ಎದ್ದು ನೋಡಲೇ? ಅಧೈರ್ಯದೊಂದಿಗೆ ಉದಾಸೀನ. ಮತ್ತೆ ಮುಸುಕು. ಪುನಃ ಅದೇ ಸದ್ದು. ಕಿರಿ-ಕಿರಿಯಾಗತೊಡಗಿತು. ಹೇಗಿದ್ದರೂ ನಿದ್ದೆಯಿಲ್ಲ ನೋಡೆ ಬಿಡುತ್ತೇನೆಂದು ಎದ್ದು ಅಡುಗೆಮನೆಗೆ ನಡೆದೆ. ಟಾರ್ಚ್ ಬಿಟ್ಟರೆ ನೆಲದಲ್ಲಿ ಮೂಷಿಕವೊಂದು ದುರುಗುಟ್ಟಿ ನನ್ನನ್ನೇ ನೋಡುತ್ತಿತ್ತು. ಅಬ್ಬ..! ಬಚಾವ್..! ಇಲಿಯಾ..? ಏನೋ ಯೋಚಿಸಿ ನಡೆದಿದ್ದ ನನಗೆ ಸಮಾಧಾನ. ಇಲಿಯಲ್ಲವೇ, ಅದು ಏನು ಮಾಡಿಯಾತು? ಮನೆಯಲ್ಲಿದ್ದ ಅಳಿದುಳುದ ಧಾನ್ಯಗಳನ್ನು ತಿಂದೀತು. ತಿನ್ನಲಿ. ಬೆಲೆ ಏರಿಕೆಯ ಈ ಸಮಯದಲ್ಲಿ ಅದಕ್ಕಾದರು ಪುಕ್ಕಟೆ ಆಹಾರ ದೊರೆಯಲಿ. ಪದವಿಪೂರ್ವ ತರಗತಿಯಲ್ಲಿ ಮಾನ್ಯ ಲೇಖಕರಾದ ವೈಕಂ ಮಹಮ್ಮದ್ ಬಶೀರ್ ಬರೆದ ಲೇಖನವನ್ನು ಪಾಠವನ್ನಾಗಿ ಓದಿದ್ದೆ. Who is the real inheritor of earth? ಈ ಭೂಮಿಯ ಅಸಲಿ ಒಡೆಯನಾರು ಎಂಬುದು ಅವರ ಪ್ರಶ್ನೆಯಾಗಿತ್ತು. ಇಲ್ಲಿ ಬದುಕುವ ಹಕ್ಕು ಮನುಷ್ಯನಿಗೆಷ್ಟಿದೆಯೋ ಅಷ್ಟೇ ಅನ್ಯಜೀವಿಗಳಿಗೂ ಇದೆ ಎಂಬುದು ಅವರ ವಾದ. ಅದೊಮ್ಮೆ ಮನಸ್ಸಿಗೆ ಬಂತು ಅದರೊಂದಿಗೆ ದುರುಗುಟ್ಟಿ ನೋಡುತ್ತಿದ್ದ ಇಲಿಯ ಮೇಲೆ ಕರುಣೆಯೂ ಉಕ್ಕಿತು. ನಾನೂ ನೆರೆಮನೆಯವರೂ, ಎಲ್ಲರೂ ಓಡಿಸಿದರೆ ನೀ ಎಲ್ಲಿಗೆ ಹೋಗುವಿಯೋ ಮಹಾಶಯ? ಎಂದು ಕೊಳ್ಳುತ್ತಾ ಪುನಃ ಹಾಸಿಗೆ ಮೇಲೆ ಹಾರಿದೆ. ಸದ್ದು ಮುಂದುವರಿದಿತ್ತು. ಕರುಣೆ ಬಂದಿದ್ದರಿಂದಲೋ ಏನೊ ಕಿರಿಕಿರಿಯಾಗಲಿಲ್ಲ. ಹತ್ತು ನಿಮಿಷ ಕಳೆದಿರಬಹುದು, ಹಾಸಿಗೆಯ ಮೇಲೇನೋ ಹರಿದ ಅನುಭವ. ಏಳಲಿಲ್ಲ. ಹೌದು, ಏನೋ ಸರ್ರನೆ ಹರಿಯುತ್ತಿದೆ. ಹಾವಿರಬಹುದೇ..? ಇಲ್ಲ. ಏಳುವ ಮನಸ್ಸಾಯಿತಾದರು ಮತ್ತದೆ ಉದಾಸೀನ. ಈಗ ಮೈಮೇಲೆ ಸರಿದ ಅನುಮಾನ. ಇಲ್ಲ, ಮೈಮೇಲೆ ಹಾರಿ ಕುಪ್ಪಳಿಸಿದ ಅನುಭವ. ಹೌದು, ಮೂಷಿಕ ಮಹಾಶಯ ಈಗ ಸಲುಗೆ ಬೆಳೆದು ಮಲಗುವ ಕೋಣೆಗೂ ಕಾಟ ಶುರುವಿಟ್ಟಿದ್ದ. ಈ ಅನುಭವ ನಾಲ್ಕಾರು ಬಾರಿ ಆದ ಮೇಲೆ ಎದ್ದು ಕುಳಿತೆ. ಟಾರ್ಚ್ ಬಿಟ್ಟೆ, ನೋಡಿದರೆ ಹಾಸಿಗೆಯ ಎರಡೂ ಬದಿಯಲ್ಲಿ ಮೂಷಿಕ ದಂಪತಿಗಳು(ಇರಬಹುದು, ಗೊತ್ತಿಲ್ಲ). ಅದಾಗಲೇ ಕೋಪ ನೆತ್ತಿಗೇರಿತ್ತು. ನಿದ್ದೆ ಕೆಟ್ಟದ್ದು ಒಂದೆಡೆಯಾದರೆ ನನ್ನ ಕರುಣೆಯನ್ನೇ ಇವು ದೌರ್ಬಲ್ಯವೆಂದು ಭಾವಿಸಿದಂತಿದೆ. ಇಲ್ಲ ಇನ್ನು ಬಿಡಲಾಗದು. ಏನು ಮಾಡಲಿ ಎಂದಿರುವಾಗಲೇ ನೆಲ ಒರೆಸುವ ಉದ್ದನೆಯ ಸಾಧನವೊಂದು ಕಣ್ಣಿಗೆ ಬಿತ್ತು. ಎತ್ತಿದೆ. ಇಲಿಗಳಾಗಲೇ ಯುದ್ಧಕ್ಕೆ ಅಣಿಯಾದಂತಿತ್ತು, ಅವುಗಳ ನೋಟ ನನಗೆ ಮುಕ್ತ ಅಹ್ವಾನ ನೀಡುತ್ತಿತ್ತು. ಬಿಡಲಾರೆ ನಿಮ್ಮ..... ಎಂದು ಅಪ್ಪಳಿಸಿದೆ. ಅರೇ ಎಲ್ಲಿ..? ಕ್ಷಣಾರ್ಧದಲ್ಲಿ ಅವು ತಪ್ಪಿಸಿ ಮತ್ತೊಂದು ಮೂಲೆ ಸೇರಿ ಮತ್ತದೇ ದೃಷ್ಟಿಯ ಪಂಥಾಹ್ವಾನ. ಅಪ್ಪಳಿಸಿದರೆ, ಸರ್ರನೇ ತಪ್ಪಿಸಿ ಮೂಲೆ ಸೇರುತ್ತಿದ್ದವು. ಯುದ್ಧ ಸಮಯದ ಗೊಡವೆಯೇ ಇಲ್ಲದೆ ಮುಂದುವರಿದಿತ್ತು. ಫ್ಯಾನಿನ ನಡುವೆಯೂ ಮೈಯಲ್ಲಿ ಬೆವರು ಧಾರಾಕಾರವಾಗಿ ಸುರಿಯುತ್ತಿತ್ತು. ಸೋಲೊಪ್ಪಿಕೊಳ್ಳಲು ಮನ ಸಿದ್ದವಿಲ್ಲ. ಕೈಯಲ್ಲಿದ್ದ ದೊಣ್ಣೆ(ನೆಲ ಒರೆಸುವ) ತುಂಡಾಗಿತ್ತು. ತುಂಡರ್ಧದಲ್ಲೇ ಮುಂದುವರೆಸಿದೆ. ಎರಡು ವೈರಿಗಳು, ನಾನೂ ನನ್ನ ಕೋಲೂ. ಅಟ್ಟಾಡಿಸಿದೆ. ಮೂಷಿಕವೊಂದು ಅಚಾನಕ್ಕಾಗಿ ಕೋಣೆಯ ನಡುಭಾಗಕ್ಕೆ ಬಂತು. ಅತ್ತಲೋ ಇತ್ತಲೋ ಎಂದು ಯೋಚಿಸುತ್ತಿರುವಾಗಲೇ ಕೈಯ್ಯ ಕೋಲು ಪ್ರಹಾರ ಮಾಡಿಯಾಗಿತ್ತು. ಗೆದ್ದೆ...! ವೈರಿಯೊಂದು ಸತ್ತಿತು ಎಂಬ ಭಾವ ಇನ್ನೊಂದನ್ನು ಹೊರಹೋಗಬಿಟ್ಟಿತು. ಬಾಲ ಹಿಡಿದು ಮೇಲಕ್ಕೆತ್ತಿದೆ. ಪಾರ್ಥನ ಸೋಲಿಸಿದ ಬಭ್ರುವಾಹನನಂತೆ ಗಾಂಭೀರ್ಯದಿಂದ ಹೊರನಡೆದೆ. ಹಿತ್ತಲ ತೋಟಕ್ಕೆ ಎಸೆದೆ.
ಕಣ್ಣು ಇನ್ನೊಂದನ್ನು ಹುಡುಕಿತಾದರೂ ಅದು ಗೋಚರಿಸಲಿಲ್ಲ. ಮಾಡಿದ್ದು ಪಾಪಕೃತ್ಯವಾಗಿದ್ದರೂ ಧೀರ್ಘ ಯುದ್ಧದ ಜಯದಿಂದ ನಿಟ್ಟುಸಿರು ಬಿಟ್ಟೆ. ಹಾಸಿಗೆ ಚೆಲ್ಲಾಪಿಲ್ಲಿಯಾಗಿತ್ತು. ಕೈಯಲ್ಲಿದ್ದ ಒರೆಸುವ ಕೋಲನ್ನು ಮೂಲೆಗೆ ಎಸೆದೆ. Rs 225 ಎಂದು ಅದರ ಮೇಲೆ ಬರೆದ ಕಾಗದದ ತುಂಡೊಂದು ಈಗ ಸರಿಯಾಗಿ ಕಣ್ಣಿಗೆ ಬಿತ್ತು.  ಹಾಸಿಗೆ ಎಳೆದು ಉರುಳಿ ಗಡಿಯಾರ ನೋಡಿದರೆ ಜಾವ ಐದೂವರೆ. ಶಿವಾ....!! ಈ ಶಿರ್ವದಲ್ಲಿ ಮತ್ತೆಂದೂ ಮೂಶಿಕನ ಕಳಿಸಬೇಡಪ್ಪಾ ಎಂದು ಮತ್ತೆ ಮುಸುಕು ಎಳೆದೆ.

Friday, March 15, 2013

ಎನಿತು ಕಳೆಯಲೀ ದಿನವ
ನಾ ಎನಿತು ಜರಿಯಲೀ ಮನವ
ಹೊರುವೆನೇ ಎನ್ನ ಪಾಪದ ಕಂತೆ
ಮೂಡಲೆನ್ನೊಳಗೆ ಪುಣ್ಯದ ಚಿಂತೆ..
ಮಸಿ ಬಳಿದಂತೆ ಕಾಣೆನ್ನ ಮೊಗ
ನಗುತಿಹುದು ನೋಡೆನ್ನ ಜಗ
ಹುಡುಕಿದರೆಂತು ಸಮಧಾನವ ಕೊನೆಗೆ
ದಿನವಿದು ಕರಾಳವೆ ಎನಗೆ
ಬೆಂದ ಕಾಯವಿದು, ವಿಷಾದದ ಉರಿ
ಅರಿಯಲಾರೆನೇ ಜನುಮದ ಗುರಿ
ಅವಸಾನವೆಂದು ಇಹದ ಈ ಪಯಣ
ಕಾದು ಕೂರಲೇ ನಾ ಎನ್ನ ಮರಣ
ಎನಿತು ಕಳೆಯಲೀ ದಿನವ
ನಾ ಎನಿತು ಜರಿಯಲೀ ಮನವ
ಇರುಳಿಗೆಲ್ಲಿಯ ಕಿರಣಗಳ ಕಾಂತಿ
ಹುಡುಕುವೆನೆಂತು ಮನದ ಶಾಂತಿ,
ಪ್ರೀತಿಯ ಉಡುಗೊರೆಯೇ ಯಾತನೆ
ತಡೆಯಲಾರದೆ ಗುಂಡಿಗೆಯ ಬೇನೆ
ನರಳುತ್ತಿರುವ ನೆನಪುಗಳು ಅಗಾಧ
ಶಮನವೆಂತು ಜೀವದ ಆರ್ತನಾದ
ಪ್ರಣಯದ ಬಾನಲ್ಲಿ ಹಾರಾಡಿ
ಬಸವಳಿದು ನಿಂತ ನೆಲದಲ್ಲೇ ಚೀರಾಡಿ
ಮಾಸದ ವೇದನೆಯದು ನನ್ನಲಿ
ಭಾವಗಳ ಪಾತವಿದು, ಹೇಗೆ ಹೇಳಲಿ.....??


Sunday, March 10, 2013

ತೀರದ ದಾಹವೇನಿದು ಒಡಲಿನಲಿ,
ನಿಲ್ಲದ ಅಲೆಯಂತೆ ಮೋಹ,ಕಡಲಿನಲಿ,
ಮನವೇಕೆ ಚಂಚಲ,ಮುಗಿಯದ ಗೊಂದಲ
ಉದ್ವೇಗ, ಸಂಗಾತಿ ಬಳಿ ನೀನಿರುವಾಗ
ಹೊತ್ತು ಸರಿದಿದೆ ಉನ್ಮಾದದಲಿ
ಮನವದು ಮೆರೆದಾಡಿದೆ ನಿನಾದದಲಿ
ಭಾಂದವ್ಯದ ಸೆಲೆ, ಕಾಣದ ಪ್ರೀತಿಯ ಬಲೆ
ಬಂದಾಗ, ಸಂಗಾತಿ ಬಳಿ ನೀನಿರುವಾಗ
ಕೊನೆಯದು, ನನ್ನ ಉಸಿರಿನಲಿ
ಉರಿಯುವುದು ಕಾಯ ಎನ್ನ ಚಿತೆಯಲಿ
ಮಾರುತವದು,ಬಾಳಿನ ಅಂತ್ಯವದು
ಹೋದಾಗ, ಸಂಗಾತಿ ನೀ ನನ್ನ ಮರೆತಾಗ......!!
ಭಾವಗಳ ಗಾನ, ಕೆಂಬಣ್ಣದ ಬಾನ
ಹ್ರದಯದ ಮೈದಾನವೀಗ ಸ್ಮಶಾನ
ಪ್ರಣಯದ ಗುರಿಯೀಗ ಬಲು ದೂರ
ಸೇರುವೆನೆಂದೊ ಭಾವಗಳ ತೀರ
ಮನದ ಹಂಬಲಗಳು ಉಕ್ಕುಕ್ಕಿ
ಸಾಗಿದೆ ಹ್ರದಯದ ಪಯಣ ಪಲ್ಲಕ್ಕಿ
ಬರದ ಯಾತನೆ, ಮನದ ವೇದನೆ
ಕಾಣದಾಗಿದೆ ವಿಧಿಯ ಯೋಜನೆ
ಹಣೆಯ ಬಾಗು, ಜೀವದ ಬೇಗು
ಕೇಳಿಸದೆ ಯಾರಿಗು ನಾಭಿಯ ಕೂಗು
ಉರಿವ ಕಿಚ್ಚಿನಲಿ ಬೆಂದಿದೆ ಕರುಳು
ಎಂದು ಮೂಡಿತೋ ಜೀವ-ಭಾವಕೆ ನೆರಳು........!