Friday, March 15, 2013

ಎನಿತು ಕಳೆಯಲೀ ದಿನವ
ನಾ ಎನಿತು ಜರಿಯಲೀ ಮನವ
ಹೊರುವೆನೇ ಎನ್ನ ಪಾಪದ ಕಂತೆ
ಮೂಡಲೆನ್ನೊಳಗೆ ಪುಣ್ಯದ ಚಿಂತೆ..
ಮಸಿ ಬಳಿದಂತೆ ಕಾಣೆನ್ನ ಮೊಗ
ನಗುತಿಹುದು ನೋಡೆನ್ನ ಜಗ
ಹುಡುಕಿದರೆಂತು ಸಮಧಾನವ ಕೊನೆಗೆ
ದಿನವಿದು ಕರಾಳವೆ ಎನಗೆ
ಬೆಂದ ಕಾಯವಿದು, ವಿಷಾದದ ಉರಿ
ಅರಿಯಲಾರೆನೇ ಜನುಮದ ಗುರಿ
ಅವಸಾನವೆಂದು ಇಹದ ಈ ಪಯಣ
ಕಾದು ಕೂರಲೇ ನಾ ಎನ್ನ ಮರಣ
ಎನಿತು ಕಳೆಯಲೀ ದಿನವ
ನಾ ಎನಿತು ಜರಿಯಲೀ ಮನವ
ಇರುಳಿಗೆಲ್ಲಿಯ ಕಿರಣಗಳ ಕಾಂತಿ
ಹುಡುಕುವೆನೆಂತು ಮನದ ಶಾಂತಿ,
ಪ್ರೀತಿಯ ಉಡುಗೊರೆಯೇ ಯಾತನೆ
ತಡೆಯಲಾರದೆ ಗುಂಡಿಗೆಯ ಬೇನೆ
ನರಳುತ್ತಿರುವ ನೆನಪುಗಳು ಅಗಾಧ
ಶಮನವೆಂತು ಜೀವದ ಆರ್ತನಾದ
ಪ್ರಣಯದ ಬಾನಲ್ಲಿ ಹಾರಾಡಿ
ಬಸವಳಿದು ನಿಂತ ನೆಲದಲ್ಲೇ ಚೀರಾಡಿ
ಮಾಸದ ವೇದನೆಯದು ನನ್ನಲಿ
ಭಾವಗಳ ಪಾತವಿದು, ಹೇಗೆ ಹೇಳಲಿ.....??


Sunday, March 10, 2013

ತೀರದ ದಾಹವೇನಿದು ಒಡಲಿನಲಿ,
ನಿಲ್ಲದ ಅಲೆಯಂತೆ ಮೋಹ,ಕಡಲಿನಲಿ,
ಮನವೇಕೆ ಚಂಚಲ,ಮುಗಿಯದ ಗೊಂದಲ
ಉದ್ವೇಗ, ಸಂಗಾತಿ ಬಳಿ ನೀನಿರುವಾಗ
ಹೊತ್ತು ಸರಿದಿದೆ ಉನ್ಮಾದದಲಿ
ಮನವದು ಮೆರೆದಾಡಿದೆ ನಿನಾದದಲಿ
ಭಾಂದವ್ಯದ ಸೆಲೆ, ಕಾಣದ ಪ್ರೀತಿಯ ಬಲೆ
ಬಂದಾಗ, ಸಂಗಾತಿ ಬಳಿ ನೀನಿರುವಾಗ
ಕೊನೆಯದು, ನನ್ನ ಉಸಿರಿನಲಿ
ಉರಿಯುವುದು ಕಾಯ ಎನ್ನ ಚಿತೆಯಲಿ
ಮಾರುತವದು,ಬಾಳಿನ ಅಂತ್ಯವದು
ಹೋದಾಗ, ಸಂಗಾತಿ ನೀ ನನ್ನ ಮರೆತಾಗ......!!
ಭಾವಗಳ ಗಾನ, ಕೆಂಬಣ್ಣದ ಬಾನ
ಹ್ರದಯದ ಮೈದಾನವೀಗ ಸ್ಮಶಾನ
ಪ್ರಣಯದ ಗುರಿಯೀಗ ಬಲು ದೂರ
ಸೇರುವೆನೆಂದೊ ಭಾವಗಳ ತೀರ
ಮನದ ಹಂಬಲಗಳು ಉಕ್ಕುಕ್ಕಿ
ಸಾಗಿದೆ ಹ್ರದಯದ ಪಯಣ ಪಲ್ಲಕ್ಕಿ
ಬರದ ಯಾತನೆ, ಮನದ ವೇದನೆ
ಕಾಣದಾಗಿದೆ ವಿಧಿಯ ಯೋಜನೆ
ಹಣೆಯ ಬಾಗು, ಜೀವದ ಬೇಗು
ಕೇಳಿಸದೆ ಯಾರಿಗು ನಾಭಿಯ ಕೂಗು
ಉರಿವ ಕಿಚ್ಚಿನಲಿ ಬೆಂದಿದೆ ಕರುಳು
ಎಂದು ಮೂಡಿತೋ ಜೀವ-ಭಾವಕೆ ನೆರಳು........!
ಆಗಸದ ತಾರೆಗಳನ್ನ ನೋಡಿದೆ,
ಲತೆಯ ಕುಸುಮಗಳನ್ನ ನೋಡಿದೆ,
ಮರದ ಕಾಯಿ-ಪಲ್ಲೆಗಳನ್ನ ನೋಡಿದೆ,
ನಸುನಕ್ಕವು ನೋಡಿ, ಕೇಳಿದವು ಹಾಡಿ,
ಹಾಯಾಗಿರುವೆವು ಜಗದಲ್ಲಿ ಜಂಟಿಯಾಗಿ..
ನೀನಾರೋ ಇರುವೆ ಒಂಟಿಯಾಗಿ.......!!